ಇಸ್ರೇಲ್-ಹಮಾಸ್ ಯುದ್ಧದಲ್ಲಿ 42 ಪತ್ರಕರ್ತರು ಮೃತ್ಯು
ಪತ್ರಕರ್ತರ ಪಾಲಿಗೆ ಮಾರಣಾಂತಿಕ ತಿಂಗಳಾಗಿ ಪರಿಣಮಿಸಿದ ಗಾಝಾ ಯುದ್ಧ: ಪತ್ರಕರ್ತರ ರಕ್ಷಣಾ ಸಮಿತಿ
Photo: PTI
ಹೊಸದಿಲ್ಲಿ: ಅಕ್ಟೋಬರ್ 7ರಿಂದ ಪ್ರಾರಂಭಗೊಂಡಿರುವ ಇಸ್ರೇಲ್-ಹಮಾಸ್ ನಡುವಿನ ಯುದ್ಧದಲ್ಲಿ ಇಲ್ಲಿಯವರೆಗೆ ಕನಿಷ್ಠ ಪಕ್ಷ 42 ಪತ್ರಕರ್ತರು ಮೃತಪಟ್ಟಿದ್ದಾರೆ ಎಂದು ಪತ್ರಕರ್ತರ ರಕ್ಷಣಾ ಸಮಿತಿಯು ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ ಎಂದು theprint.in ವರದಿ ಮಾಡಿದೆ.
1992ರಿಂದ ದಾಳಿಗಳಲ್ಲಿ ಮೃತಪಟ್ಟಿರುವ ಪತ್ರಕರ್ತರ ದತ್ತಾಂಶವನ್ನು ಕಲೆ ಹಾಕುತ್ತಾ ಬಂದಿರುವ, ಪತ್ರಿಕೋದ್ಯಮದ ಸ್ವಾತಂತ್ರ್ಯವನ್ನು ಪ್ರಚಾರ ಮಾಡುತ್ತಾ, ಪತ್ರಕರ್ತರ ಹಕ್ಕುಗಳನ್ನು ರಕ್ಷಿಸುತ್ತಾ ಬರುತ್ತಿರುವ ನ್ಯೂಯಾರ್ಕ್ ಮೂಲದ ಲಾಭರಹಿತ ಸಂಸ್ಥೆಯಾದ ಪತ್ರಕರ್ತರ ರಕ್ಷಣಾ ಸಮಿತಿಯು, ಗಾಝಾದಲ್ಲಿನ ಯುದ್ಧದ ಅವಧಿಯನ್ನು ‘ಪತ್ರಕರ್ತರ ಪಾಲಿಗೆ ಮಾರಣಾಂತಿಕ ತಿಂಗಳು’ ಎಂದು ಬಣ್ಣಿಸಿದೆ.
“ಯುದ್ಧ ಪ್ರಾರಂಭವಾದ ಅಕ್ಟೋಬರ್ 7ರಿಂದ ನವೆಂಬರ್ 13ರವರೆಗೆ 12,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಈ ಪೈಕಿ ಕನಿಷ್ಠ ಪಕ್ಷ 42 ಮಂದಿ ಪತ್ರಕರ್ತರು ಹಾಗೂ ಮಾಧ್ಯಮ ಉದ್ಯೋಗಿಗಳು ಮೃತಪಟ್ಟಿದ್ದಾರೆ ಎಂಬ ಸಂಗತಿಯು ಪತ್ರಕರ್ತರ ರಕ್ಷಣಾ ಸಮಿತಿಯ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಯುದ್ಧದಲ್ಲಿ ಮೃತಪಟ್ಟಿರುವವರ ಪೈಕಿ 11,070ಕ್ಕೂ ಹೆಚ್ಚು ಫೆಲೆಸ್ತೀನಿಯನ್ನರು ಗಾಝಾ ಮತ್ತು ವೆಸ್ಟ್ ಬ್ಯಾಂಕ್ ಗೆ ಸೇರಿದ್ದರೆ, 1,200 ಮಂದಿ ಇಸ್ರೇಲ್ ಗೆ ಸೇರಿದ್ದಾರೆ ಎಂದು ಮಂಗಳವಾರ ಬಿಡುಗಡೆ ಮಾಡಿರುವ ತನ್ನ ಹೇಳಿಕೆಯಲ್ಲಿ ಈ ಸಮಿತಿಯು ಪ್ರತಿಪಾದಿಸಿದೆ.
ಯುದ್ಧದಲ್ಲಿ ಮೃತಪಟ್ಟಿರುವ ಪತ್ರಕರ್ತರ ಪೈಕಿ 37 ಮಂದಿ ಫೆಲೆಸ್ತೀನಿಯನ್ನರು, 4 ಮಂದಿ ಇಸ್ರೇಲಿಗರು ಹಾಗೂ ಓರ್ವ ಲೆಬನಾನ್ ಪತ್ರಕರ್ತ ಸೇರಿದ್ದಾರೆ. ಇದಲ್ಲದೆ ಮೂವರು ಪತ್ರಕರ್ತರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಇವರೊಂದಿಗೆ 13 ಮಂದಿ ಪತ್ರಕರ್ತರನ್ನು ಬಂಧಿಸಲಾಗಿದೆ. ಯುದ್ಧವನ್ನು ವರದಿ ಮಾಡುತ್ತಿರುವ ಪತ್ರಕರ್ತರು ಹಲವು ಹಲ್ಲೆಗಳು, ಬೆದರಿಕೆಗಳು, ಸೈಬರ್ ದಾಳಿಗಳು, ಸುದ್ದಿಗಳ ಪ್ರಸಾರಕ್ಕೆ ತಡೆ ಹಾಗೂ ತಮ್ಮ ಕುಟುಂಬದ ಸದಸ್ಯರ ಹತ್ಯೆಗಳನ್ನು ಅನುಭವಿಸಿದ್ದಾರೆ ಎಂದೂ ಪತ್ರಕರ್ತರ ರಕ್ಷಣಾ ಸಮಿತಿಯು ಹೇಳಿದೆ.
“ನಾಗರಿಕರಾಗಿರುವ ಪತ್ರಕರ್ತರು ಬಿಕ್ಕಟ್ಟಿನ ಸಮಯದಲ್ಲಿ ಮುಖ್ಯ ಕೆಲಸವನ್ನು ನಿರ್ವಹಿಸುತ್ತಿದ್ದು, ಯುದ್ಧನಿರತ ದೇಶಗಳು ಅವರನ್ನು ಗುರಿಯಾಗಿಸಿಕೊಳ್ಳಬಾರದು ಎಂಬುದು ಪತ್ರಕರ್ತರ ರಕ್ಷಣಾ ಸಮಿತಿಯ ಅಭಿಪ್ರಾಯವಾಗಿದೆ. ಈ ಹೃದಯ ವಿದ್ರಾವಕ ಸಂಘರ್ಷವನ್ನು ವರದಿ ಮಾಡಲು ಈ ಪ್ರಾಂತ್ಯದ ಪತ್ರಕರ್ತರು ಬಹುದೊಡ್ಡ ತ್ಯಾಗ ಮಾಡುತ್ತಿದ್ದಾರೆ” ಎಂದು ಪತ್ರಕರ್ತರ ರಕ್ಷಣಾ ಸಮಿತಿಯು ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಕಾರ್ಯಕ್ರಮ ಸಮನ್ವಯಕಾರ ಶೆರೀಫ್ ಮನ್ಸೂರ್ ಮನವಿ ಮಾಡಿದ್ದಾರೆ.