ಸಾಂಕ್ರಾಮಿಕ ರೋಗ ವಿರುದ್ಧದ ಒಪ್ಪಂದ ಗಡುವು ಮೀರುತ್ತಿದೆ: ವಿಶ್ವ ಆರೋಗ್ಯ ಸಂಸ್ಥೆ ಕಳವಳ
Photo:PTI
ಜಿನೆವಾ : ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡುವ ಕಾನೂನುಬದ್ಧ ಒಪ್ಪಂದಕ್ಕೆ ಸಮ್ಮತಿಸಲು ವಿಧಿಸಲಾಗಿರುವ ಗಡುವನ್ನು ದೇಶಗಳು ತಪ್ಪಿಸಿಕೊಳ್ಳುವ ಅಪಾಯ ಎದುರಾಗಿದೆ. ಇದು ಮುಂದಿನ ಪೀಳಿಗೆಗೆ ಮಾರಕ ಪ್ರಹಾರವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಎಚ್ಚರಿಕೆ ನೀಡಿದೆ.
ಕೋವಿಡ್-19 ಸಾಂಕ್ರಾಮಿಕವು 7 ದಶಲಕ್ಷಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡ ನಂತರ ಹೊಸ ರೋಗಕಾರಕಗಳ ವಿರುದ್ಧ ವಿಶ್ವದ ರಕ್ಷಣೆಯನ್ನು ಹೆಚ್ಚಿಸಲು ಹೊಸ ಒಪ್ಪಂದ ಮತ್ತು ಅಸ್ತಿತ್ವದಲ್ಲಿರುವ ನಿಮಯಗಳ ನವೀಕರಣ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರತಿಪಾದಿಸಲು ಹೊಸ ಒಪ್ಪಂದಕ್ಕೆ ಮೇ ತಿಂಗಳವರೆಗೆ ಗಡುವು ವಿಧಿಸಿದೆ. `ವಿಶ್ವಸಂಸ್ಥೆಯ ಸದಸ್ಯ ದೇಶಗಳು ತಮ್ಮ ಬದ್ಧತೆಯನ್ನು ಪೂರೈಸಲು ವಿಫಲವಾಗಬಹುದು ಮತ್ತು ಹಲವು ವಿಷಯಗಳು ಇನ್ನೂ ಬಗೆಹರಿದಿಲ್ಲ. ನಿಗದಿತ ಗಡುವಿನೊಳಗೆ ಒಪ್ಪಂದ ಸಾಧ್ಯವಾಗದಿದ್ದರೆ ಅದು ಕೈತಪ್ಪಿದ ಅವಕಾಶವಾಗಲಿದೆ ಮತ್ತು ಇದಕ್ಕಾಗಿ ಮುಂದಿನ ತಲೆಮಾರು ನಮ್ಮನ್ನು ಎಂದಿಗೂ ಕ್ಷಮಿಸದು' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧನಾಮ್ ಘೆಬ್ರಯೇಸಸ್ ಹೇಳಿದ್ದಾರೆ.