ಬ್ರೆಝಿಲ್ ಪ್ರವಾಹ | ಮೃತರ ಸಂಖ್ಯೆ 57ಕ್ಕೆ ಏರಿಕೆ
PC : NDTV
ಬ್ರಸೀಲಿಯಾ : ಬ್ರೆಝಿಲ್ನಲ್ಲಿ ಸುರಿಯುತ್ತಿರುವ ಭಾರೀ ಮಳೆ, ಭೂಕುಸಿತ ಹಾಗೂ ಪ್ರವಾಹದಿಂದ ಕನಿಷ್ಠ 57 ಮಂದಿ ಮೃತಪಟ್ಟಿದ್ದು 70,000 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 370ಕ್ಕೂ ಅಧಿಕ ಮಂದಿ ಇನ್ನೂ ನಾಪತ್ತೆಯಾಗಿದ್ದು ಅವರ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಬ್ರೆಝಿಲ್ನ ನಾಗರಿಕ ರಕ್ಷಣಾ ಏಜೆನ್ಸಿ ಶನಿವಾರ ಹೇಳಿದೆ.
ದಕ್ಷಿಣದ ರಾಜ್ಯ ರಿಯೊ ಗ್ರಾಂಡೆ ದೊಸುಲ್ ಜಲಾವೃತಗೊಂಡಿದ್ದು ವಾಣಿಜ್ಯ ಕೇಂದ್ರ ಅಲೆಗ್ರೆಯಲ್ಲಿ ವ್ಯಾಪಾರ ಚಟುವಟಿಕೆಗೆ ತೊಡಕಾಗಿದೆ. ಪ್ರವಾಹದಿಂದಾಗಿ ದೇಶದ 281 ಪುರಸಭೆಗಳಲ್ಲಿ ಜನಜೀವನದ ಮೇಲೆ ಪರಿಣಾಮ ಬೀರಿದೆ. ಗುಯಾಬ ನದಿ ನೀರು ಅಪಾಯದ ಮಟ್ಟ ಮೀರಿ 5.04 ಮೀಟರ್ ಗೆ ತಲುಪಿದ್ದು ಇದು 1941ರ ಪ್ರವಾಹದ ಬಳಿಕದ ದಾಖಲೆಯ ಮಟ್ಟವಾಗಿದೆ. ಪೋರ್ಟೋ ಅಲೆಗ್ರೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅಂತರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಅಮಾನತುಗೊಳಿಸಿದೆ. ರಿಯೊ ಗ್ರಾಂಡೆ ದೊಸುಲ್ನಲ್ಲಿ ಅಣೆಕಟ್ಟೆಯೊಂದು ಭಾಗಶಃ ಕುಸಿದಿದ್ದು ಮತ್ತೊಂದು ಜಲವಿದ್ಯುತ್ ಸ್ಥಾವರದ ಅಣೆಕಟ್ಟೆಗೆ ಹಾನಿಯಾಗಿದ್ದು ಕುಸಿಯುವ ಅಪಾಯದಲ್ಲಿದೆ. ನಗರದ 6 ನೀರು ಶುದ್ಧೀಕರಣ ಘಟಕಗಳಲ್ಲಿ ನಾಲ್ಕನ್ನು ಮುಚ್ಚಿರುವುದರಿಂದ ನೀರು ಮತ್ತು ಆಹಾರದ ಬಳಕೆ ಕನಿಷ್ಠಗೊಳಿಸುವಂತೆ ನಿವಾಸಿಗಳಿಗೆ ಸಲಹೆ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.