ಡೊನಾಲ್ಡ್ ಟ್ರಂಪ್ ಮೇಲಿನ ದಾಳಿಯಿಂದ ತೀವ್ರ ಕಳವಳಗೊಂಡಿದ್ದೇನೆ: ಪ್ರಧಾನಿ ಮೋದಿ
ಘಟನೆಯನ್ನು ಖಂಡಿಸಿದ ಜೋ ಬೈಡನ್, ಬರಾಕ್ ಒಬಾಮಾ
ಹೊಸದಿಲ್ಲಿ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ನಡೆದಿರುವ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಖಂಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನನ್ನ ಸ್ನೇಹಿತ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ದಾಳಿಯಿಂದ ತೀವ್ರ ಕಳವಳಗೊಂಡಿದ್ದೇನೆ. ಘಟನೆಯನ್ನು ಬಲವಾಗಿ ಖಂಡಿಸುತ್ತೇನೆ. ರಾಜಕೀಯ ಮತ್ತು ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಸ್ಥಾನವಿಲ್ಲ. ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
ಟ್ರಂಪ್ ಕ್ಷೇಮವಾಗಿದ್ದು, ನಾನು ಎಲ್ಲ ಮಾಹಿತಿ ಪಡೆಯುತ್ತಿದ್ದೇನೆ, ಶೀಘ್ರದಲ್ಲೇ ಅವರ ಜೊತೆ ಮಾತನಾಡಲಿದ್ದೇನೆ. ಟ್ರಂಪ್ ಅವರು ಸುರಕ್ಷಿತವಾಗಿದ್ದಾರೆ ಎಂದು ಹೇಳಲು ಬಯಸುತ್ತೇನೆ. ಅವರಿಗಾಗಿ ಮತ್ತು ಅವರ ಕುಟುಂಬಕ್ಕಾಗಿ ಮತ್ತು ಸಮಾವೇಶದಲ್ಲಿದ್ದ ಎಲ್ಲರಿಗೂ ಪ್ರಾರ್ಥಿಸುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದೇವೆ. ಅಮೆರಿಕದಲ್ಲಿ ಇಂತಹ ಹಿಂಸಾಚಾರವನ್ನು ಖಂಡಿಸಲು ನಾವು ಒಂದು ರಾಷ್ಟ್ರವಾಗಿ ಒಗ್ಗಟ್ಟಾಗಬೇಕು ಎಂದು ಬೈಡೆನ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ನಮ್ಮ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಹಿಂಸೆಗೆ ಯಾವುದೇ ಸ್ಥಾನವಿಲ್ಲ. ಏನಾಯಿತು ಎಂದು ನಮಗೆ ಇನ್ನೂ ನಿಖರವಾಗಿ ತಿಳಿದಿಲ್ಲವಾದರೂ, ಮಾಜಿ ಅಧ್ಯಕ್ಷ ಟ್ರಂಪ್ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ನಾವೆಲ್ಲರೂ ನಿರಾಳರಾಗಬೇಕು. ಮತ್ತು ನಮ್ಮ ರಾಜಕೀಯದಲ್ಲಿ ನಾಗರಿಕತೆ ಮತ್ತು ಗೌರವಕ್ಕೆ ನಮ್ಮನ್ನು ಮರುಹೊಂದಿಸಲು ಈ ಕ್ಷಣವನ್ನು ಬಳಸಿಕೊಳ್ಳಬೇಕು. ಮಿಶೆಲ್ ಮತ್ತು ನಾನು ಟ್ರಂಪ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದೇವೆ ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.