ಅಮೆರಿಕದ ತಂತ್ರಜ್ಞಾನ ಮಾರುಕಟ್ಟೆಯನ್ನೇ ಅಲುಗಾಡಿಸಿದ ಡೀಪ್ ಸೀಕ್!

ವಾಷಿಂಗ್ಟನ್: ಚೀನಾದ ಒಂದು ಪುಟ್ಟ ಸ್ಟಾರ್ಟ್ ಅಪ್ ಆಗಿರುವ ಡೀಪ್ ಸೀಕ್ (DeepSeek) ಅಮೆರಿಕದ ತಂತ್ರಜ್ಞಾನ ಮಾರುಕಟ್ಟೆಯನ್ನೇ ಅಲುಗಾಡಿಸಿದೆ. ಎನ್ವಿಡಿಯಾ (Nvidia) ಚಿಪ್ ತಯಾರಕ ಸಂಸ್ಥೆಯ ಮೌಲ್ಯ ಸೋಮವಾರ ಒಂದೇ ದಿನದಲ್ಲಿ ಸರಿಸುಮಾರು 52 ಲಕ್ಷ ಕೋಟಿ(600 ಬಿಲಿಯನ್ ಡಾಲರ್) ರೂ. ಕುಸಿತಕ್ಕೆ ಡೀಪ್ ಸೀಕ್ ಕಾರಣವಾಗಿದೆ.
ಅಮೆರಿಕದ AI ಮಾರುಕಟ್ಟೆಯಲ್ಲಿ ಆಟ ಪ್ರಾರಂಭಿಸಿರುವ ಡೀಪ್ ಸೀಕ್ ಚೀನಾದ ಹೊಸ AI ಮಾದರಿಯಾಗಿದ್ದು, ಟೆಕ್ ಪ್ರಪಂಚದ ಗಮನವನ್ನು ಸೆಳೆದಿದೆ. ಚಾಟ್ ಜಿಪಿಟಿ, ಜೆಮಿನಿ ಮತ್ತು ಕ್ಲೌಡ್ ಎಐ ಅನ್ನು ಮೀರಿಸಿದೆ.
ಕಳೆದ ವಾರ ಬಿಡುಗಡೆಯಾದ ಡೀಪ್ ಸೀಕ್ ಅಪ್ಲಿಕೇಶನ್, ಚಾಟ್ ಜಿಪಿಟಿ ಸೇರಿದಂತೆ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಮೆರಿಕದಲ್ಲಿ ಹೆಚ್ಚು ಡೌನ್ಲೋಡ್ ಮಾಡಿದ ಉಚಿತ ಅಪ್ಲಿಕೇಶನ್ ಆಗಿದೆ. ಇದರಿಂದಾಗಿ US-ಆಧಾರಿತ ಮತ್ತು AI-ಸಂಬಂಧಿತ ಟೆಕ್ ಫರ್ಮ್ಗಳಾದ Nvidia, Microsoft ಮತ್ತು Metaಗಳಲ್ಲಿನ ಷೇರುಗಳು ಸೋಮವಾರ US ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡಿದೆ ಎಂದು BBC ವರದಿ ಮಾಡಿದೆ. ಡೀಪ್ ಸೀಕ್ ನಿಂದ ಅಮೆಝಾನ್ ಷೇರುಗಳ ಮೇಲೂ ಸಾಕಷ್ಟು ಹೊಡೆತ ಬಿದ್ದಿದೆ.
ಇಂಡಿಯಾ ಟುಡೇ ಪ್ರಕಾರ, ಉದ್ಯಮಿ ಲಿಯಾಂಗ್ ವೆನ್ ಫೆಂಗ್ ಅವರು 2023ರಲ್ಲಿ ಡೀಪ್ ಸೀಕ್ ಕಂಪೆನಿಯನ್ನು ಸ್ಥಾಪಿಸಿದರು. ಕೇವಲ 6 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದಲ್ಲಿ ಜಗತ್ತನ್ನೇ ನಿಬ್ಬೆರೆಗಾಗಿಸುವ ಡೀಪ್ ಸೀಕ್ ಎಐ ಸರ್ವೀಸ್ ಅಭಿವೃದ್ಧಿಪಡಿಸಲಾಗಿದೆ. ಡೀಪ್ ಸೀಕ್ ಅನ್ನು ರಚಿಸುವ ಮೊದಲು, ಅವರು ಹಣಕಾಸಿನ ಡೇಟಾವನ್ನು ವಿಶ್ಲೇಷಿಸಲು AI ಅನ್ನು ಬಳಸುವುದಕ್ಕೆ ಹೆಸರುವಾಸಿಯಾದ ಹೆಡ್ಜ್ ಫಂಡ್ ಅನ್ನು ಮುನ್ನಡೆಸಿದರು. ಡೀಪ್ ಸೀಕ್ ಮುನ್ನಡೆಸುವ ಲಿಯಾಂಗ್ ತಂಡವು ಚೀನಾದ ಉನ್ನತ ವಿಶ್ವವಿದ್ಯಾಲಯಗಳಾದ ಸಿಂಗುವಾ ಮತ್ತು ಪೀಕಿಂಗ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದಾರೆ.
ಆ್ಯಪ್ ಸ್ಟೋರ್ನಲ್ಲಿನ ಅದರ ವಿವರಣೆಯ ಪ್ರಕಾರ ಡೀಪ್ ಸೀಕ್ ಇದು ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಸಮರ್ಥನೀಯವಾಗಿದ್ದು ಮತ್ತು ನಿಮ್ಮ ಜೀವನವನ್ನು ಪರಿಣಾಮಕಾರಿಯನ್ನಾಗಿ ರೂಪಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಹೇಳುತ್ತದೆ. ಬಳಕೆದಾರರ ಅನಿಸಿಕೆಯ ಪ್ರಕಾರ ಇದು ಬರವಣಿಗೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ.
ಡೀಪ್ ಸೀಕ್ ಹೊಸದಾಗಿ ಬಿಡುಗಡೆ ಮಾಡಿರುವ R1 ಚಾಟ್ಬಾಟ್ ನ ಕಾರ್ಯ ಸಾಮರ್ಥ್ಯ, ಮತ್ತು ಅದನ್ನು ಅಭಿವೃದ್ಧಿಪಡಿಸುವುದಕ್ಕೆ ಕೂಡ ಹೆಚ್ಚು ಖರ್ಚು ಮಾಡಬೇಕಿಲ್ಲ. ಇದು ಮಾರುಕಟ್ಟೆಯಲ್ಲಿ ತಲ್ಲಣಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಎನ್ ವಿಡಿಯಾದಂತಹ ಅಮೆರಿಕದ ಕಂಪನಿಗಳು ಅಭಿವೃದ್ಧಿಪಡಿಸಿರುವ ಚಿಪ್ ಗಳನ್ನು ಚೀನಾದ ಕಂಪೆನಿಗಳು ಪಡೆಯದಂತೆ ಅಮೆರಿಕವು ರಫ್ತು ನಿಷೇಧ ವಿಧಿಸಿರುವ ಹೊರತಾಗಿಯೂ ಈ ಡೀಪ್ ಸೀಕ್ ಮಾಡೆಲ್ ಜಗತ್ತಿನಾದ್ಯಂತ ಸೇವೆಗೆ ಲಭ್ಯವಿದೆ.