ಉಕ್ರೇನ್ ರಕ್ಷಣಾ ಸಚಿವರ ವಜಾ
Photo: twitter/@oleksiireznikov
ಕೀವ್: ಉಕ್ರೇನ್ನ ರಕ್ಷಣಾ ಸಚಿವ ಒಲೆಕ್ಸಿಯ್ ರೆಝ್ನಿಕೋವ್ರನ್ನು ವಜಾಗೊಳಿಸಿ ಅವರ ಸ್ಥಾನದಲ್ಲಿ ರುಸ್ತೆಮ್ ಉಮೆರೋವ್ರನ್ನು ನೇಮಕ ಮಾಡಲಾಗುವುದು ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಘೋಷಿಸಿದ್ದಾರೆ.
`ಒಲೆಕ್ಸಿಯ್ ರೆಝ್ನಿಕೋವ್ 550 ದಿನಗಳಿಗೂ ಅಧಿಕ ಸಮಯದಿಂದ ನಡೆಯುತ್ತಿರುವ ಪೂರ್ಣಪ್ರಮಾಣದ ಯುದ್ಧದಲ್ಲಿ ರಕ್ಷಣಾ ಇಲಾಖೆಯ ನೇತೃತ್ವ ವಹಿಸಿದ್ದರು. ಇದೀಗ ಇಲಾಖೆಗೆ ಹೊಸ ಕಾರ್ಯವಿಧಾನದ ಅಗತ್ಯವಿದೆ ಮತ್ತು ಸೇನೆ ಹಾಗೂ ಸಮಾಜದ ನಡುವಿನ ಸಂವಹನದ ಇತರ ಸ್ವರೂಪಗಳ ಅಗತ್ಯವಿದೆ ಎಂದು ಭಾವಿಸಿದ್ದೇನೆ. ಆದ್ದರಿಂದ ರೆಝ್ನಿಕೋವ್ರ ಸ್ಥಾನದಲ್ಲಿ ಉಮೆರೋವ್ರನ್ನು ನೇಮಿಸಲು ಬಯಸಿದ್ದೇನೆ' ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ವಿಪಕ್ಷದ ಸಂಸದರಾದ 41 ವರ್ಷದ ಉಮೆರೊವ್ 2022ರ ಸೆಪ್ಟಂಬರ್ನಿಂದ ಉಕ್ರೇನ್ನ `ರಾಷ್ಟ್ರೀಯ ಆಸ್ತಿನಿಧಿ'ಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯುದ್ಧ ಕೈದಿಗಳ, ರಾಜಕೀಯ ಕೈದಿಗಳ ವಿನಿಮಯ ಪ್ರಕ್ರಿಯೆ, ಆಕ್ರಮಿತ ಪ್ರದೇಶಗಳಿಂದ ನಾಗರಿಕರ ತೆರವು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ವಿಶ್ವಸಂಸ್ಥೆ ಮತ್ತು ಟರ್ಕಿ ಮಧ್ಯಸ್ಥಿಕೆಯಲ್ಲಿ ನಡೆದ ಆಹಾರ ಧಾನ್ಯ ರಫ್ತು ಒಪ್ಪಂದದ ಮಾತುಕತೆಯಲ್ಲಿ ರಶ್ಯದ ನಿಯೋಗದ ಸದಸ್ಯರಾಗಿದ್ದರು.