ರಾಷ್ಟ್ರೀಯ ಹಿತಾಸಕ್ತಿಯ ರಕ್ಷಣೆಗೆ ಮೊದಲ ಆದ್ಯತೆ: ರಶ್ಯ ಅಧ್ಯಕ್ಷ ಪುಟಿನ್
Photo : PTI
ಮಾಸ್ಕೊ, ಡಿ.22: ರಶ್ಯ ತನ್ನ ರಾಷ್ಟ್ರೀಯ ಹಿತಾಸಕ್ತಿಯ ರಕ್ಷಣೆಗೆ ಸಮರ್ಥವಾಗಿದೆ ಮತ್ತು ನಮ್ಮದಾಗಿರುವುದನ್ನು ಯಾವತ್ತೂ ಬಿಟ್ಟುಕೊಡಲು ಸಿದ್ಧವಿಲ್ಲ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ಮಾಸ್ಕೋದಲ್ಲಿ ರಕ್ಷಣಾ ಪಡೆಯ ಮುಖ್ಯಸ್ಥರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಪುಟಿನ್ `ಅವರು( ಉಕ್ರೇನ್, ಅಮೆರಿಕ ಮತ್ತು ಯುರೋಪ್) ಬಯಸಿದರೆ ಉಕ್ರೇನ್ನ ಭವಿಷ್ಯದ ಕುರಿತು ಮಾತುಕತೆಗೆ ನಾವು ಸಿದ್ಧವಿದ್ದೇವೆ. ಆದರೆ ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ಮೊದಲ ಆದ್ಯತೆ' ಎಂದರು.
`ಉಕ್ರೇನ್, ಅಮೆರಿಕ ಮತ್ತು ಯುರೋಪ್ನಲ್ಲಿ ರಶ್ಯದ ಬಗ್ಗೆ ಆಕ್ರಮಣಕಾರಿ ಧೋರಣೆ ಹೊಂದಿರುವವರು ಮಾತುಕತೆ ಬಯಸುತ್ತಿದ್ದಾರೆಯೇ? ಅವರೇ ನಿರ್ಧರಿಸಲಿ. ನಾವು ಮಾತುಕತೆಗೆ ಸಿದ್ಧ. ಆದರೆ ನಮ್ಮದಾಗಿರುವುದನ್ನು ಖಂಡಿತಾ ಬಿಟ್ಟುಕೊಡುವುದಿಲ್ಲ. ಉಕ್ರೇನ್ ನೇಟೊದ ಸದಸ್ಯತ್ವ ನಮಗೆ ಸ್ವೀಕಾರಾರ್ಹವಾಗಿಲ್ಲ. ಅಮೆರಿಕ ತನ್ನ ಸ್ವಾರ್ಥ ಸಾಧನೆಗಾಗಿ ಯುರೋಪ್ ಅನ್ನು ರಶ್ಯದ ವಿರುದ್ಧ ಎತ್ತಿಕಟ್ಟುತ್ತಿದೆ. ಆದರೆ ರಶ್ಯವು ಯುರೋಪ್ನಲ್ಲಿ ಯುದ್ಧಕ್ಕೆ ಯೋಜನೆ ಹಾಕಿಕೊಂಡಿಲ್ಲ ಎಂದು ಪುಟಿನ್ ಹೇಳಿದ್ದಾರೆ.
1991ರಲ್ಲಿ ಸೋವಿಯತ್ ಒಕ್ಕೂಟ ಪತನಗೊಂಡ ಬಳಿಕ ಉಕ್ರೇನ್ನ ಭಾಗವೆಂದು ಅಂತರಾಷ್ಟ್ರೀಯ ಮಾನ್ಯತೆ ಪಡೆದಿರುವ ಸುಮಾರು 17.5% ಪ್ರದೇಶವನ್ನು ರಶ್ಯ ಸ್ವಾಧೀನಪಡಿಸಿಕೊಂಡಿದೆ. 2014ರಲ್ಲಿ ರಶ್ಯವು ಕ್ರಿಮಿಯಾ ಪ್ರಾಂತವನ್ನು ಸ್ವಾಧೀನಪಡಿಸಿಕೊಂಡಿತ್ತು ಮತ್ತು ಕಳೆದ ವರ್ಷ ಉಕ್ರೇನ್ನ ಮತ್ತೂ ನಾಲ್ಕು ಪ್ರಾಂತಗಳನ್ನು ಸ್ವಾಧೀನಕ್ಕೆ ಪಡೆದಿದೆ.