ಇಸ್ರೇಲ್ಗೆ ಶಸ್ತ್ರಾಸ್ತ್ರ ವರ್ಗಾವಣೆ ತಕ್ಷಣ ಸ್ಥಗಿತಕ್ಕೆ ಆಗ್ರಹ
ಜಿನೆವಾ ನಿರ್ಣಯ ಗೌರವಿಸಲು ವಿಶ್ವಸಂಸ್ಥೆ ತಜ್ಞರ ಒತ್ತಾಯ
Photo: NDTV
ಜಿನೆವಾ: ಗಾಝಾದಲ್ಲಿ ಬಳಸಲಾಗುವ ಯಾವುದೇ ಶಸ್ತ್ರಾಸ್ತ್ರಗಳು ಅಥವಾ ಮದ್ದುಗುಂಡುಗಳನ್ನು ಇಸ್ರೇಲ್ಗೆ ವರ್ಗಾಯಿಸುವುದು ಅಂತರಾಷ್ಟ್ರೀಯ ಮಾನವೀಯ ಕಾನೂನನ್ನು ಉಲ್ಲಂಘಿಸುವ ಸಾಧ್ಯತೆಯಿರುವುದರಿಂದ ತಕ್ಷಣವೇ ನಿಲ್ಲಿಸಬೇಕು ಎಂದು ವಿಶ್ವಸಂಸ್ಥೆ ತಜ್ಞರು ಎಚ್ಚರಿಸಿದ್ದಾರೆ.
1949ರ ಜಿನೆವಾ ನಿರ್ಣಯ ಮತ್ತು ಅಂತರಾಷ್ಟ್ರೀಯ ಕಾನೂನಿನ ಪ್ರಕಾರ, ಸಂಘರ್ಷದ ಸಂದರ್ಭ ಎಲ್ಲಾ ದೇಶಗಳೂ ಅಂತರಾಷ್ಟ್ರೀಯ ಮಾನವೀಯ ಕಾನೂನಿಗೆ ಗೌರವವನ್ನು ಖಾತರಿ ಪಡಿಸಬೇಕಿದೆ. ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಲು ಬಳಕೆಯಾಗುವ ಯಾವುದೇ ಆಯುಧ ಅಥವಾ ಮದ್ದುಗುಂಡುಗಳನ್ನು ವರ್ಗಾಯಿಸುವುದರಿಂದ ದೇಶಗಳು ದೂರವಿರಬೇಕು ಎಂದು ಹೇಳಿಕೆಯಲ್ಲಿ ಆಗ್ರಹಿಸಲಾಗಿದೆ.ಶಸ್ತ್ರಾಸ್ತ್ರ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿರುವ ದೇಶಗಳು `ಶಸ್ತ್ರಾಸ್ತ್ರಗಳನ್ನು ಅಂತರಾಷ್ಟ್ರೀಯ ಅಪರಾಧಕ್ಕೆ ಬಳಸಲಾಗುವುದು ಎಂದು ತಿಳಿದಿದ್ದರೆ ಅಥವಾ ಅಂತರಾಷ್ಟ್ರೀಯ ಮಾನವೀಯ ಕಾನೂನನ್ನು ಉಲ್ಲಂಘಿಸುವ ಕೃತ್ಯಕ್ಕೆ ಬಳಸಬಹುದು ಎಂಬುದು ತಿಳಿದಿದ್ದರೆ ಶಸ್ತ್ರಾಸ್ತ್ರ ರಫ್ತುಗಳನ್ನು ನಿರಾಕರಿಸಲು ಹೆಚ್ಚುವರಿ ಒಪ್ಪಂದದ ಕಟ್ಟುಪಾಡುಗಳನ್ನು ಹೊಂದಿರುತ್ತಾರೆʼ ಎಂದು ವಿಶ್ವಸಂಸ್ಥೆ ತಜ್ಞರು ಎಚ್ಚರಿಸಿದ್ದಾರೆ.
ಗಾಝಾದಲ್ಲಿ ನರಮೇಧದ ಸಂಭವನೀಯ ಅಪಾಯವಿದೆ ಮತ್ತು ನಾಗರಿಕರಿಗೆ ಗಂಭೀರ ಹಾನಿಯನ್ನು ಮುಂದುವರಿಸಿದೆ ಎಂದು 2024ರ ಜನವರಿ 26ರಂದು ಅಂತರಾಷ್ಟ್ರೀಯ ನ್ಯಾಯಾಲಯ(ಐಸಿಜೆ) ನೀಡಿರುವ ತೀರ್ಪು ಇಸ್ರೇಲ್ ಮೇಲೆ ಶಸ್ತ್ರಾಸ್ತ್ರ ನಿರ್ಬಂಧದ ಅಗತ್ಯವನ್ನು ಮನದಟ್ಟು ಮಾಡಿದೆ ಎಂದವರು ಹೇಳಿದ್ದಾರೆ. ಬೆಲ್ಜಿಯಂ, ಇಟಲಿ, ಸ್ಪೇನ್, ನೆದರ್ಲ್ಯಾಂಡ್ಸ್ ಮತ್ತು ಜಪಾನ್ ಸಂಸ್ಥೆಗಳು ಇಸ್ರೇಲ್ಗೆ ಶಸ್ತ್ರಾಸ್ತ್ರ ವರ್ಗಾವಣೆಯನ್ನು ಅಮಾನತುಗೊಳಿಸಿವೆ.
ಅಮೆರಿಕ, ಜರ್ಮನಿ, ಫ್ರಾನ್ಸ್, ಬ್ರಿಟನ್, ಕೆನಡಾ ಮತ್ತು ಆಸ್ಟ್ರೇಲಿಯಾಗಳು ಇಸ್ರೇಲ್ಗೆ ಅತೀ ಹೆಚ್ಚು ಶಸ್ತ್ರಾಸ್ತ್ರ ಪೂರೈಸುವ ದೇಶಗಳಾಗಿದ್ದು ಅಕ್ಟೋಬರ್ 7ರಂದು ಇಸ್ರೇಲ್ ಮೇಲಿನ ಹಮಾಸ್ ದಾಳಿಯ ಬಳಿಕ ಶಸ್ತ್ರಾಸ್ತ್ರ ಆಮದು ಪ್ರಮಾಣವನ್ನು ಇಸ್ರೇಲ್ ಮತ್ತಷ್ಟು ಹೆಚ್ಚಿಸಿದೆ.
ಇಸ್ರೇಲ್ಗೆ ಎಫ್-35 ಯುದ್ಧವಿಮಾನ ರಫ್ತಿಗೆ ತಡೆ
ಈ ಮಧ್ಯೆ, ಇಸ್ರೇಲ್ಗೆ ಎಫ್-35 ಯುದ್ಧವಿಮಾನಗಳನ್ನು ರಫ್ತು ಮಾಡುವ ನೆದರ್ ಲ್ಯಾಂಡ್ ಸರಕಾರದ ಯೋಜನೆಯನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ನೆದರ್ ಲ್ಯಾಂಡ್ ನ ಮೇಲ್ಮನವಿ ನ್ಯಾಯಾಲಯ ಫೆಬ್ರವರಿ 12ರಂದು ಎತ್ತಿಹಿಡಿದಿದೆ.
`ಈ ಶಸ್ತ್ರಾಸ್ತ್ರಗಳನ್ನು ಅಂತರಾಷ್ಟ್ರೀಯ ಮಾನವೀಯ ಕಾನೂನಿನ ಗಂಭೀರ ಉಲ್ಲಂಘನೆಗೆ ಬಳಸುವ ಬಗ್ಗೆ ಸ್ಪಷ್ಟ ಅಪಾಯವಿದೆ. ಕೆಲವು ಪ್ರಕರಣಗಳಲ್ಲಿ ಇಸ್ರೇಲ್ ಮಾನವೀಯ ಯುದ್ಧದ ಕಾನೂನನ್ನು ಉಲ್ಲಂಘಿಸಿರುವ ಬಗ್ಗೆ ಸೂಚನೆಗಳಿವೆ' ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶವನ್ನು ಸ್ವಾಗತಿಸಿರುವ ವಿಶ್ವಸಂಸ್ಥೆ ತಜ್ಞರು, ಅಂತರಾಷ್ಟ್ರೀಯ ಕಾನೂನನ್ನು ಅನುಸರಿಸಲು ಇಸ್ರೇಲ್ ಪದೇಪದೇ ವಿಫಲವಾಗಿದೆ ಎಂದಿದ್ದಾರೆ.