ಡೆಮಾಕ್ರಟಿಕ್ ಸಮಾವೇಶ |ಪೆಲೆಸ್ತೀನ್ ಪರ ಪ್ರತಿಭಟನಾಕಾರರಿಂದ ಭದ್ರತೆ ಉಲ್ಲಂಘನೆ
PC : indiatoday.in
ವಾಶಿಂಗ್ಟನ್ : ಅಮೆರಿಕದ ಚಿಕಾಗೊ ನಗರದಲ್ಲಿ ಸೋಮವಾರ ಆರಂಭಗೊಂಡ ಡೆಮಾಕ್ರಟಿಕ್ ಪಕ್ಷದ ಸಮಾವೇಶ ನಡೆಯುತ್ತಿದ್ದ ಸಭಾಂಗಣದ ಒಂದು ಬದಿಯಲ್ಲಿ ನಿರ್ಮಿಸಲಾಗಿದ್ದ ಭದ್ರತಾ ತಡೆಬೇಲಿಯನ್ನು ಫೆಲೆಸ್ತೀನ್ ಪರ ಪ್ರತಿಭಟನಾಕಾರರು ಮುರಿದು, ಗಾಝಾ ಯುದ್ಧದಲ್ಲಿ ಇಸ್ರೇಲ್ಗೆ ಅಮೆರಿಕ ಬೆಂಬಲ ನೀಡುವುದನ್ನು ವಿರೋಧಿಸಿ ಘೋಷಣೆ ಕೂಗಿದರು ಎಂದು ವರದಿಯಾಗಿದೆ.
ಚಿಕಾಗೋ ನಗರದಲ್ಲಿ ಜಾಥಾ ನಡೆಸಿದ ಫೆಲೆಸ್ತೀನ್ ಪರ ಪ್ರತಿಭಟನಾಕಾರರು ಬಳಿಕ ಡೆಮಾಕ್ರಟಿಕ್ ಸಮಾವೇಶ ನಡೆಯುವ ಸಭಾಂಗಣದ ಹೊರಗೆ ನಿರ್ಮಿಸಲಾಗಿದ್ದ ತಡೆಬೇಲಿಯನ್ನು ಮುರಿದು ಒಳನುಗ್ಗಲು ಪ್ರಯತ್ನಿಸಿದರು. ತಕ್ಷಣ ಭದ್ರತಾ ಸಿಬ್ಬಂದಿ ಪ್ರತಿಭಟನಾಕಾರರನ್ನು ತಡೆದರು. ಘಟನೆಗೆ ಸಂಬಂಧಿಸಿ ಹಲವರನ್ನು ಬಂಧಿಸಲಾಗಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.
ಚಿಕಾಗೋ ಅಮೆರಿಕದ ಅತೀ ದೊಡ್ಡ ಫೆಲೆಸ್ತೀನ್ ಸಮುದಾಯಕ್ಕೆ ನೆಲೆಯಾಗಿದೆ. ಚಿಕಾಗೋ ನಗರದ ಪಶ್ಚಿಮ ಭಾಗದಲ್ಲಿರುವ ಪಾರ್ಕ್ ನಲ್ಲಿ ನಡೆದ ಮತ್ತೊಂದು ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಕದನ ವಿರಾಮಕ್ಕೆ ಆಗ್ರಹಿಸಿದರು ಮತ್ತು ಉಪಾಧ್ಯಕ್ಷೆ, ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ರನ್ನು `ಕಿಲ್ಲರ್ ಕಮಲಾ' ಎಂದು ಉಲ್ಲೇಖಿಸಿ ಘೋಷಣೆ ಕೂಗಿದರು. ಬಳಿಕ ಹೆಚ್ಚುವರಿ ಭದ್ರತಾ ಸಿಬ್ಬಂದಿಯ ನೆರವು ಪಡೆದು ಪ್ರತಿಭಟನಾಕಾರರನ್ನು ಚದುರಿಸಲಾಗಿದೆ ಎಂದು `ಯುಎಸ್ಎ ಟುಡೆ' ವರದಿ ಮಾಡಿದೆ.