ಬಾಂಗ್ಲಾದೇಶದಲ್ಲಿ ಡೆಂಗ್ಯೂ ಜ್ವರ ಉಲ್ಪಣ: 61,500 ಮಂದಿಗೆ ಸೋಂಕು, 293 ಮಂದಿ ಮೃತ್ಯು
ಢಾಕಾ: ಬಾಂಗ್ಲಾದೇಶದಲ್ಲಿ ಮಾರಣಾಂತಿಕ ಡೆಂಗ್ಯೂ ಜ್ವರ ಉಲ್ಬಣಿಸಿದ್ದು, ಅತ್ಯಂತ ಜನಸಾಂದ್ರತೆಯ ಪ್ರದೇಶದಲ್ಲಿ ಕ್ಷಿಪ್ರವಾಗಿ ಹರಡುತ್ತಿರುವುದರಿಂದ ಆಸ್ಪತ್ರೆಯಲ್ಲಿ ಸ್ಥಳಾವಕಾಶದ ಕೊರತೆ ಉಂಟಾಗಿದೆ ಎಂದು ಬಾಂಗ್ಲಾದ ಆರೋಗ್ಯ ಇಲಾಖೆಯ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಈ ವರ್ಷ ಇದುವರೆಗೆ ಸುಮಾರು 61,500 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಕನಿಷ್ಟ 293 ಮಂದಿ ಮೃತಪಟ್ಟಿದ್ದಾರೆ. 2000ದಲ್ಲಿ ಬಾಂಗ್ಲಾದಲ್ಲಿ ಡೆಂಗಿ ಪ್ರಕರಣ ಪ್ರಥಮ ಬಾರಿಗೆ ವರದಿಯಾದ ಬಳಿಕ ಅತೀ ಹೆಚ್ಚು ಪ್ರಕರಣ 2023ರಲ್ಲಿ ದಾಖಲಾಗಿದೆ. ತೀವ್ರ ಜ್ವರ, ವಾಂತಿ ಮತ್ತು ಕೀಲುನೋವಿನಿಂದ ಬಳಲುತ್ತಿರುವ ರೋಗಿಗಳ ಪ್ರಮಾಣ ಹೆಚ್ಚಿರುವುದರಿಂದ ರಾಜಧಾನಿ ಢಾಕಾದ ಆಸ್ಪತ್ರೆಗಳಲ್ಲಿ ಸ್ಥಳಾವಕಾಶದ ಕೊರತೆಯಾಗಿದೆ. ಸೊಳ್ಳೆಗಳಿಂದ ಹರಡುವ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನವನ್ನು ಹಂಚಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಝಾಹಿದ್ ಮಲೆಖ್ ಹೇಳಿದ್ದಾರೆ.
ಡೆಂಗ್ಯೂಗೆ ನಿರ್ಧಿಷ್ಟವಾಗಿ ಚಿಕಿತ್ಸೆ ನೀಡುವ ಯಾವುದೇ ಲಸಿಕೆ ಅಥವಾ ಔಷಧಿ ಇಲ್ಲ. ಇದು ದಕ್ಷಿಣ ಏಶ್ಯಾದಲ್ಲಿ ಜೂನ್-ಸೆಪ್ಟಂಬರ್ನ ಮುಂಗಾರು ಅವಧಿಯಲ್ಲಿ ಸಾಮಾನ್ಯವಾಗಿದೆ. ಈ ಮಾರಣಾಂತಿಕ ವೈರಸ್ ಅನ್ನು ಹರಡುವ ಸೊಳ್ಳೆ ನಿಂತ ನೀರಿನಲ್ಲಿ ಬೆಳೆಯುತ್ತದೆ.
ಆಗಸ್ಟ್-ಸೆಪ್ಟಂಬರ್ ಅವಧಿಯಲ್ಲಿ ಸೋಂಕಿನ ಪ್ರಕರಣ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. ಏಶ್ಯಾದ್ಯಂತ ಹವಾಮಾನ ವೈಪರೀತ್ಯಗಳು ಮಕ್ಕಳ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ. ಡೆಂಗ್ಯೂ ರೋಗ ಅಪಾಯಕಾರಿ ರೀತಿಯಲ್ಲಿ ಉಲ್ಬಣಿಸುತ್ತಿರುವುದು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು `ಸೇವ್ ದಿ ಚಿಲ್ಡ್ರನ್ಸ್' ಸಂಘಟನೆಯ ಹಿರಿಯ ಆರೋಗ್ಯ ಸಲಹೆಗಾರ ಡಾ. ಯಾಸಿರ್ ಅರಾಫತ್ ಹೇಳಿದ್ದಾರೆ.
ಸಾಂಕ್ರಾಮಿಕ ಮಟ್ಟದ ಬೆದರಿಕೆ
ಪ್ರಪಂಚದ ಸುಮಾರು 50%ದಷ್ಟು ಜನಸಂಖ್ಯೆ ಈಗ ಡೆಂಗ್ಯೂ ಜ್ವರದ ಅಪಾಯದಲ್ಲಿದ್ದು ವೇಗವಾಗಿ ಬದಲಾಗುತ್ತಿರುವ ಹವಾಮಾನವು ಬೆಚ್ಚಗಿನ ಮತ್ತು ಆದ್ರ್ರ ವಾತಾವರಣಕ್ಕೆ ಕಾರಣವಾಗುತ್ತದೆ. ಇದು ಸೊಳ್ಳೆಗಳ ಸಂತಾನೋತ್ಪತ್ತಿಗೆ ಅನುಕೂಲಕರವಾಗಿದ್ದು 2019ರಲ್ಲಿ 129 ದೇಶಗಳಲ್ಲಿ 5.2 ದಶಲಕ್ಷ ಡೆಂಗಿ ಪ್ರಕರಣ ದಾಖಲಾಗಿದೆ. 2023ರ ವರ್ಷದಲ್ಲೂ ಅತ್ಯಧಿಕ ಡೆಂಗಿ ಪ್ರಕರಣ ದಾಖಲಾಗುವ ನಿರೀಕ್ಷೆಯಿದೆ ಎಂದು ವಿಶ್ವ ಆರೋಗ್ಯ ಸಂಘಟನೆಯ ` ನಿರ್ಲಕ್ಷಿತ ಉಷ್ಣವಲಯದ ರೋಗಗಳ ನಿಯಂತ್ರಣ ಯೋಜನೆ'ಯ ಮುಖ್ಯಸ್ಥ ರಾಮನ್ ವೇಲಾಯುಧನ್ ಹೇಳಿದ್ದಾರೆ.
ಡೆಂಗ್ಯೂ ಕ್ಷಿಪ್ರ ಹರಡುವಿಕೆಯು ಸಾಂಕ್ರಾಮಿಕ ಮಟ್ಟದ ಬೆದರಿಕೆಯನ್ನು ಪ್ರತಿನಿಧಿಸುತ್ತದೆ ಎಂದು ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.