ಫೆಲಸ್ತೀನ್ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಗಡಿಪಾರು: ವಿಶ್ವಸಂಸ್ಥೆ ತಜ್ಞರು ಹೇಳಿದ್ದೇನು?

PC: ohchr.org
ಜಿನೀವಾ: ಫೆಲಸ್ತೀನ್ ಪರ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಕ್ಕೆ ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಗಡಿಪಾರು ಮಾಡುವುದು ಸೇರಿದಂತೆ ಅಮೆರಿಕದ ಕಾನೂನುಬದ್ಧ ಖಾಯಂ ನಿವಾಸಿಗಳನ್ನು ಅನಿಯಂತ್ರಿತವಾಗಿ ಬಂಧಿಸುವ ಪ್ರತೀಕಾರದ ಕ್ರಮಗಳನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರ ಸ್ವತಂತ್ರ ಗುಂಪು ಅಮೆರಿಕದ ರಕ್ಷಣಾ ಇಲಾಖೆ ಹಾಗೂ ವಲಸೆ ಮತ್ತು ಕಸ್ಟಮ್ಸ್ ಜಾರಿ ಇಲಾಖೆಯನ್ನು ಆಗ್ರಹಿಸಿದೆ.
“ಈ ತಾರತಮ್ಯದ ಕ್ರಮಗಳು ಆಘಾತಕಾರಿಯಾಗಿದ್ದು, ಅಸಮಾನತೆಯಿಂದ ಕೂಡಿದೆ. ಇದು ಅನಗತ್ಯವಾಗಿ ವಿಶ್ವವಿದ್ಯಾನಿಲಯದ ಕ್ಯಾಂಪಸ್ಗಳಲ್ಲಿನ ಕಲಿಕಾ ವಾತಾವರಣದ ಮೇಲೆ ನಕಾರಾತ್ಮಕ ಪರಿಣಾಮ ಬೀರಿ ಹೆಚ್ಚಿನ ಧ್ರುವೀಕರಣಕ್ಕೆ ಕಾರಣವಾಗಲಿದೆ”, ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
“ವಿಶ್ವವಿದ್ಯಾಲಯಗಳಲ್ಲಿ ಫೆಲಸ್ತೀನ್ ಪರ ಶಾಂತಿಯುತ ಸಭೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಮತ್ತು ನಾಗರಿಕರ ಮೇಲೆ ಈ ರೀತಿಯ ಕ್ರಮಗಳು ಕೈಗೊಂಡಿರುವುದು ಸಂಘಟನಾ ಚಟುವಟಿಕೆಯಲ್ಲಿ ಭಾಗವಹಿಸುವ, ಸಭೆ ಸೇರುವ ಜನರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ", ಎಂದು ವಿಶ್ವಸಂಸ್ಥೆಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
“ಗಾಝಾದಲ್ಲಿ ಯುದ್ಧದಿಂದಾಗಿ ಅಲ್ಲಿನ ಜನರ ನರಳುವಿಕೆ ಕಂಡು ಜಗತ್ತೇ ಕಂಪಿಸಿದೆ. ಈ ಮಧ್ಯೆ ವಿದ್ಯಾರ್ಥಿಗಳು ಮತ್ತು ಬೋಧಕರು ಅವರಿಗೆ ಬೆಂಬಲ ನೀಡಲು ಒಗ್ಗಟ್ಟಾಗುತ್ತಿದ್ದಾರೆ. ಆದರೆ ಅವರೆಲ್ಲರೂ ಅಂತಿಮವಾಗಿ ಹತಾಶರಾಗುವ, ವ್ಯವಸ್ಥೆಗೆ ಬಲಿಪಶುಗಳಾಗುವ ವಾತಾವರಣ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಬೆದರಿಕೆ ಹಾಕುವುದು, ಕಿರುಕುಳ ನೀಡುವುದು ಮತ್ತು ದೈಹಿಕವಾಗಿ ದಾಳಿ ಮಾಡುವುದು ನಡೆಯುತ್ತಿವೆ. ಕ್ಯಾಂಪಸ್ಗಳಲ್ಲಿ ವಿದ್ಯಾರ್ಥಿ ಸಮುದಾಯದ ನಡುವೆ ವಿಭಜನೆಗಳಾಗಿದೆ. ವೀಸಾ ರದ್ದತಿ, ಗಡಿಪಾರು ಸೇರಿದಂತೆ ಮತ್ತಷ್ಟು ದಮನಕಾರಿ ನೀತಿಗಳು ಕ್ಯಾಂಪಸ್ಗಳಲ್ಲಿ ಶಾಂತಿಯನ್ನು ಮರುಸ್ಥಾಪಿಸುವುದಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ನಡುವೆ ಸಮನ್ವಯ, ಪರಸ್ಪರ ಗೌರವ ಕಾಪಾಡುವ ಅವಶ್ಯಕತೆಯಿದೆ. ಕೆಲವೊಮ್ಮೆ ಲಿಂಗ ಸಮಾನತೆ ಮತ್ತು ತಾರತಮ್ಯದ ಕುರಿತ ಮಹಿಳಾ ವಿದ್ಯಾರ್ಥಿಗಳ ನಿರ್ಣಾಯಕ ಸಮಸ್ಯೆಗಳನ್ನು ನಿಭಾಯಿಸಲು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಸಂಘಟನೆಗಳು ಮಹತ್ವದ ಪಾತ್ರ ನಿರ್ವಹಿಸುತ್ತದೆ. ಅವುಗಳನ್ನು ಹತ್ತಿಕ್ಕುವ ಕ್ರಮಗಳು ಸರಿಯಲ್ಲ", ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಉಚ್ಛಾಟನೆ, ಗಡಿಪಾರು ಮಾಡುವುದು, ಶೈಕ್ಷಣಿಕ ಕೋರ್ಸ್ಗಳನ್ನು ಪೂರ್ಣಗೊಳಿಸಿ ಪದವಿ ಪಡೆಯುವ ಹಕ್ಕನ್ನು ನಿರಾಕರಿಸುವ ಕ್ರಮಗಳು ವಿದ್ಯಾರ್ಥಿಗಳ ಪಾಲಿಗೆ ವಿನಾಶಕಾರಿಯಾಗಲಿದೆ. ಇದು ಭವಿಷ್ಯದ ಶೈಕ್ಷಣಿಕ ಅಥವಾ ವೃತ್ತಿಪರ ಆಕಾಂಕ್ಷೆಗಳನ್ನು ಪೂರೈಸುವ ಬದುಕಿನ ಹಕ್ಕನ್ನೇ ಕಸಿದುಕೊಳ್ಳಲಿದೆ. ಇದೆಲ್ಲವೂ ಸರ್ವಾಧಿಕಾರಿಗಳು ಕೈಗೊಳ್ಳುವ ಕ್ರಮದಂತೆ ಕಂಡು ಬರುತ್ತಿದೆ ಎಂದು ಮಾನವ ಹಕ್ಕುಗಳ ತಜ್ಞರ ಗುಂಪು ಆತಂಕ ವ್ಯಕ್ತಪಡಿಸಿದೆ.
ಶಾಂತಿಯುತ ಸಭೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ವಿರುದ್ಧ ಕಣ್ಗಾವಲು ಹಾಕುವುದು, ಪೊಲೀಸರು ಮತ್ತು ಇತರ ಕಾನೂನು ಜಾರಿ ಅಧಿಕಾರಿಗಳು ಸೇರಿದಂತೆ ಬಾಹ್ಯ ಇಲಾಖೆಗಳೊಂದಿಗೆ ವಿದ್ಯಾರ್ಥಿಗಳ ವೈಯುಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ವಿಶ್ವವಿದ್ಯಾಲಯಗಳು ನಿಲ್ಲಿಸಬೇಕು. ಅಂತರರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಕಾನೂನು ಮಾನದಂಡಗಳಿಗೆ ಅನುಗುಣವಾಗಿ ವಿವಿಗಳು ತಮ್ಮ ಆಂತರಿಕ ನಿಯಮಗಳನ್ನು ಪರಿಶೀಲಿಸಬೇಕು. ಎಲ್ಲಾ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಸುಸ್ಥಿರ, ಶಾಂತಿಯುತ ಕ್ಯಾಂಪಸ್ಗಳ ನಿರ್ಮಾಣಕ್ಕೆ ಮುಂದಾಗಬೇಕು ಎಂದು ವಿಶ್ವಸಂಸ್ಥೆಯ ತಜ್ಞರು ಒತ್ತಿ ಹೇಳಿದ್ದಾರೆ.
ಹೆಚ್ಚುತ್ತಿರುವ ಕಿರುಕುಳ, ತಾರತಮ್ಯ, ಪ್ರತ್ಯೇಕತೆ, ಭಯದ ವಾತಾವರಣದಲ್ಲಿ ವಿದ್ಯಾರ್ಥಿಗಳು ಮತ್ತು ವಿಭಿನ್ನ ದೃಷ್ಟಿಕೋನಗಳ ಬೋಧಕರ ನಡುವೆ ಸಮನ್ವಯತೆ ಸಾಧಿಸುವ ತುರ್ತು ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದಲ್ಲಿ ಎಲ್ಲಾ ಸಮುದಾಯಗಳ ಮಾನವ ಹಕ್ಕುಗಳನ್ನು ಕಾಪಾಡುವ, ಸಹಾನುಭೂತಿಯಿರುವ ಪರಸ್ಪರ ಗೌರವದ, ಮುಕ್ತ ಸಂವಾದ ಮಾಡುವ ವಾತಾವರಣ ನಿರ್ಮಾಣ ಮಾಡುವ ಅಗತ್ಯತೆಯಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರ ಗುಂಪು ಆಗ್ರಹಿಸಿದೆ.