ವಾಶಿಂಗ್ಟನ್ ನಲ್ಲಿನ ಅವ್ಯವಸ್ಥೆಗಳು ಪ್ರಧಾನಿ ಮೋದಿ ಸೇರಿದಂತೆ ವಿಶ್ವ ನಾಯಕರ ಕಣ್ಣಿಗೆ ಬೀಳುವುದು ನನಗೆ ಬೇಕಿರಲಿಲ್ಲ: ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ (PTI)
ನ್ಯೂಯಾರ್ಕ್/ವಾಶಿಂಗ್ಟನ್: ನನ್ನನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಇನ್ನಿತರ ವಿಶ್ವ ನಾಯಕರ ಕಣ್ಣಿಗೆ ವಾಶಿಂಗ್ಟನ್ ಡಿಸಿಯಲ್ಲಿರುವ ಫೆಡರಲ್ ಕಟ್ಟಡದ ಬಳಿಯಿರುವ ಗುಡಾರಗಳು ಹಾಗೂ ಗೋಡೆ ಬರಹಗಳು ಬೀಳುವುದು ನನಗೆ ಬೇಕಿರಲಿಲ್ಲ. ಹೀಗಾಗಿ, ನಾನು ಅಮೆರಿಕ ರಾಜಧಾನಿ ವಾಶಿಂಗ್ಟನ್ ಅನ್ನು ಸ್ವಚ್ಛಗೊಳಿಸುವಂತೆ ಆದೇಶಿಸಿದ್ದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಶುಕ್ರವಾರ ನ್ಯಾಯ ಇಲಾಖೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, “ನಾವು ನಮ್ಮ ನಗರವನ್ನು ಸ್ವಚ್ಛಗೊಳಿಸುತ್ತಿದ್ದೇವೆ. ಇಲ್ಲಿ ಅಪರಾಧ ಕೃತ್ಯಗಳು ನಡೆಯಲು ಅವಕಾಶ ನೀಡುವುದಿಲ್ಲ. ನಾವು ಅಪರಾಧ ಕೃತ್ಯಗಳ ಬೆನ್ನಿಗೆ ನಿಲ್ಲುವುದಿಲ್ಲ. ಅಲ್ಲಿನ ಗೋಡೆ ಬರಹಗಳನ್ನು ಅಳಿಸಿ ಹಾಕಲು ಮುಂದಾಗಿದ್ದು, ಅಲ್ಲಿರುವ ಟೆಂಟ್ ಗಳನ್ನು ನೆಲಸಮಗೊಳಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಇಲ್ಲಿಯವರೆಗೆ ರಾಜಧಾನಿಯನ್ನು ಸ್ವಚ್ಛಗೊಳಿಸುವ ಉತ್ತಮ ಕೆಲಸವನ್ನು ವಾಶಿಂಗ್ಟನ್ ಡಿಸಿ ಮೇಯರ್ ಮುರಿಯೆಲ್ ಬೌಸರ್ ಮಾಡಿದ್ದಾರೆ ಎಂದೂ ಅವರು ಶ್ಲಾಘಿಸಿದ್ದಾರೆ.
“ದೇಶದ ಸರಕಾರಿ ಇಲಾಖೆಗಳ ಮುಂದೆಯೇ ಟೆಂಟ್ ಗಳು ಎದ್ದು ನಿಂತಿವೆ ಎಂದು ನನಗೆ ತಿಳಿಯಿತು. ಅವೆಲ್ಲ ನೆಲಸಮಗೊಳ್ಳಬೇಕು. ಆ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಇಲ್ಲಿಯವರೆಗೆ ಉತ್ತಮ ಕೆಲಸವಾಗಿದ್ದು, ಅಮೆರಿಕ ರಾಜಧಾನಿಯು ಇಡೀ ವಿಶ್ವದಲ್ಲೇ ಮನೆಮಾತಾಗಬೇಕು ಎಂಬುದು ನಮ್ಮ ಬಯಕೆಯಾಗಿದೆ” ಎಂದು ಅವರು ಅಭಿಪ್ರಾಯ ಪಟ್ಟರು.
“ಭಾರತದ ಪ್ರಧಾನಿ ನರೇಂದ್ರ ಮೋದಿ, ಫ್ರಾನ್ಸ್ ನ ಅಧ್ಯಕ್ಷ, ಬ್ರಿಟನ್ ನ ಪ್ರಧಾನಿ ಎಲ್ಲರೂ ಕಳೆದ ಒಂದೂವರೆ ವಾರದಲ್ಲಿ ನನ್ನನ್ನು ಭೇಟಿಯಾಗಲು ಬಂದಿದ್ದರು. ಅವರು ಬಂದಾಗ ನಾನು ರಸ್ತೆ ವೀಕ್ಷಣೆಗೆ ತೆರಳಿದ್ದೆ. ನನಗೆ ಅವರು ಟೆಂಟ್, ಗೋಡೆ ಬರಹಗಳು, ರಸ್ತೆಯಲ್ಲಿ ಮುರಿದು ಬಿದ್ದಿರುವ ತಡೆಗೋಡೆಗಳು ಹಾಗೂ ರಸ್ತೆ ಗುಂಡಿಗಳನ್ನು ನೋಡುವುದು ಬೇಡವಾಗಿತ್ತು. ಹೀಗಾಗಿ, ನಾವು ಅದನ್ನೆಲ್ಲ ನವೀಕರಣಗೊಳಿಸಿದೆವು” ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷರಾಗಿ ಎರಡನೆ ಬಾರಿ ಅಧಿಕಾರ ಸ್ವೀಕರಿಸಿದ ಕೇವಲ ಒಂದೂವರೆ ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಜಪಾನ್ ಪ್ರಧಾನಿ ಶಿಗೆರು ಇಶಿಬಾ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹಾಗೂ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಸೇರಿದಂತೆ ವಿವಿಧ ವಿಶ್ವ ನಾಯಕರಿಗೆ ಡೊನಾಲ್ಡ್ ಟ್ರಂಪ್ ಆತಿಥ್ಯ ನೀಡಿದ್ದಾರೆ.