ಭಾರತದ ಜತೆ ರಾಜತಾಂತ್ರಿಕ ಸಂಘರ್ಷ: ಕೆನಡಾ ಬೆಂಬಲಕ್ಕೆ ನಿಂತ ಅಮೆರಿಕ, ಬ್ರಿಟನ್
Photo: PTI
ವಾಷಿಂಗ್ಟನ್: ಭಾರತದಲ್ಲಿ ಕೆನಡಾದ ರಾಜತಾಂತ್ರಿಕ ಅಸ್ತಿತ್ವವನ್ನು ಕಡಿತಗೊಳಿಸುವಂತೆ ಆ ದೇಶದ ಮೇಲೆ ಒತ್ತಡ ತರಬಾರದು ಎಂದು ಅಮೆರಿಕ ಹಾಗೂ ಬ್ರಿಟನ್ ಶುಕ್ರವಾರ ಭಾರತವನ್ನು ಒತ್ತಾಯಿಸಿವೆ. ಸಿಕ್ಖ್ ಪ್ರತ್ಯೇಕತಾವಾದಿ ಮುಖಂಡನ ಹತ್ಯೆ ಹಿನ್ನೆಲೆಯಲ್ಲಿ ಉದ್ಭವಿಸಿದ ರಾಜತಾಂತ್ರಿಕ ಸಂಘರ್ಷದ ಕಾರಣದಿಂದ ಕೆನಡಾ 41 ಮಂದಿ ರಾಜತಾಂತ್ರಿಕ ಸಿಬ್ಬಂದಿಯನ್ನು ವಾಪಾಸು ಕರೆಸಿಕೊಂಡ ಬೆನ್ನಲ್ಲೇ ಈ ದೇಶಗಳು ಹೇಳಿಕೆ ನೀಡಿವೆ.
ಕೆನಡಾ ಪ್ರಜೆ ಹಾಗೂ ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ ಅವರನ್ನು ವ್ಯಾಂಕೋವರ್ ಉಪನಗರದಲ್ಲಿ ಜೂನ್ನಲ್ಲಿ ಹತ್ಯೆ ಮಾಡಲಾಗಿದ್ದು, ಈ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಆಪಾದಿಸಿದ್ದು, ಭಾರತ ಇದನ್ನು ನಿರಾಕರಿಸಿದೆ.
"ಭಾರತದಲ್ಲಿ ಕೆನಡಾ ತನ್ನ ರಾಜತಾಂತ್ರಿಕ ಅಸ್ತಿತ್ವವನ್ನು ಕಡಿತಗೊಳಿಸಬೇಕು ಎಂಬ ಭಾರತದ ಒತ್ತಡದ ಹಿನ್ನೆಲೆಯಲ್ಲಿ ಕೆನಡಾ ರಾಜತಾಂತ್ರಿಕರು ಭಾರತದಿಂದ ನಿರ್ಗಮಿಸಿರುವ ಬಗ್ಗೆ ನಮಗೆ ಕಳವಳವಾಗಿದೆ" ಎಂದು ಅಮೆರಿಕದ ರಕ್ಷಣಾ ಖಾತೆ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿಕೆ ನೀಡಿದ್ದಾರೆ.
ಕೆನಡಾ ಆರೋಪವನ್ನು ಅಮೆರಿಕ ತೀವ್ರವಾಗಿ ಪರಿಗಣಿಸಿದೆ ಎಂದು ವಾಷಿಂಗ್ಟನ್ ಸ್ಪಷ್ಟಪಡಿಸಿದ್ದು, ಪಾಶ್ಚಿಮಾತ್ಯ ದೇಶಗಳು ಭಾರತವನ್ನು ಬಹಿರಂಗವಾಗಿ ಖಂಡಿಸದಿದ್ದರೂ, ತನಿಖೆಗೆ ಭಾರತ ಸಹಕರಿಸಬೇಖು ಎಂದು ಒತ್ತಾಯಿಸಿವೆ. ಅಮೆರಿಕ ಹಾಗೂ ಬ್ರಿಟನ್ ಭಾರತದ ಜತೆಗಿನ ಸಂಬಂಧಕ್ಕೆ ಧಕ್ಕೆ ಉಂಟು ಮಾಡಿಕೊಳ್ಳಲು ಬಯಸುವುದಿಲ್ಲ ಎಂದು ವಿಶ್ಲೇಷಕರು ಹೇಳಿದ್ದಾರೆ.
ಆದರೆ ಈ ಪ್ರಕರಣದಲ್ಲಿ ಇದುವರೆಗೆ ಅಮೆರಿಕದ ರಕ್ಷಣಾ ಇಲಾಖೆ ಹಾಗೂ ಬ್ರಿಟನ್ನ ವಿದೇಶಾಂಗ ಕಚೇರಿ ನೀಡಿರುವ ಹೇಳಿಕೆಗಳ ಪೈಕಿ ನಿನ್ನೆಯ ಹೇಳಿಕೆ ನೇರ ಟೀಕೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೆನಡಾ ರಾಜತಾಂತ್ರಿಕ ಸಿಬ್ಬಂದಿಯನ್ನು ಕಡಿತಗೊಳಿಸಬೇಕು ಎಂಬ ಭಾರತದ ನಿರ್ಧಾರಕ್ಕೆ ನಮ್ಮ ಸಹಮತ ಇಲ್ಲ ಎಂದು ಬ್ರಿಟನ್ ವಿದೇಶಿ ಕಚೇರಿಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.