ಫ್ರಾನ್ಸ್ ಪಡೆಗಳನ್ನು ಉಕ್ರೇನ್‍ಗೆ ಕಳಿಸಿದರೆ ನೇರ ದಾಳಿ: ರಶ್ಯ ಎಚ್ಚರಿಕೆ
ಮಾಸ್ಕೋ: ಫ್ರಾನ್ಸ್ ಅಧ್ಯಕ್ಷ ಇಮಾನುವೆಲ್ ಮ್ಯಾಕ್ರೋನ್ ತನ್ನ ಪಡೆಗಳನ್ನು ಉಕ್ರೇನ್‍ಗೆ ಕಳುಹಿಸಿದರೆ ಅವುಗಳನ್ನು ಕಾನೂನುಬದ್ಧ ಗುರಿಯೆಂದು ಪರಿಗಣಿಸಿ ದಾಳಿ ನಡೆಸಲಾಗುವುದು ಎಂದು ರಶ್ಯ ಬುಧವಾರ ಫ್ರಾನ್ಸ್ ಗೆ ಎಚ್ಚರಿಕೆ ನೀಡಿದೆ.
ಉಕ್ರೇನ್‍ನಲ್ಲಿ ರಶ್ಯ ಗೆದ್ದರೆ ಯುರೋಪ್‍ನ ವಿಶ್ವಾಸಾರ್ಹತೆ ಶೂನ್ಯಕ್ಕೆ ಇಳಿಯಲಿದೆ ಎಂದು ಎಚ್ಚರಿಕೆ ನೀಡಿದ್ದ ಮ್ಯಾಕ್ರೋನ್, ಉಕ್ರೇನ್‍ನಲ್ಲಿ ಫ್ರಾನ್ಸ್ ನ ಪದಾತಿ ದಳದ ನಿಯೋಜನೆಯನ್ನು ತಳ್ಳಿಹಾಕಲಾಗದು ಎಂದು ಇತ್ತೀಚೆಗೆ ಹೇಳಿದ್ದರು. `ರಶ್ಯಕ್ಕೆ ಕಾರ್ಯತಂತ್ರದ ಅನಿಶ್ಚಿತತೆ ಮತ್ತು ಗೊಂದಲ ಸೃಷ್ಟಿಸಲು ಮ್ಯಾಕ್ರೋನ್ ಈ ರೀತಿಯ ವಾಕ್ಚಾತುರ್ಯ ಪ್ರದರ್ಶಿಸಿರುವುದು ಸ್ಪಷ್ಟವಾಗಿದೆ. ಆದರೆ ಅವರ ಉದ್ದೇಶ ಸಫಲವಾಗದು. ನಮ್ಮ ನಿಲುವು ಮತ್ತು ಗುರಿಯ ಬಗ್ಗೆ ನಮಗೆ ಸ್ಪಷ್ಟತೆಯಿದೆ' ಎಂದು ರಶ್ಯ ವಿದೇಶಾಂಗ ಇಲಾಖೆಯ ವಕ್ತಾರೆ ಮರಿಯಾ ಝಕರೋವ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
`ಫ್ರೆಂಚರು ಸಂಘರ್ಷ ವಲಯದಲ್ಲಿ ಕಾಣಿಸಿಕೊಂಡರೆ, ಅವರು ಅನಿವಾರ್ಯವಾಗಿ ರಶ್ಯನ್ ಸಶಸ್ತ್ರ ಪಡೆಗಳಿಗೆ ಗುರಿಯಾಗುತ್ತಾರೆ. ಪ್ಯಾರಿಸ್ ಈಗಾಗಲೇ ಇದಕ್ಕೆ ಪುರಾವೆಗಳನ್ನು ಹೊಂದಿದೆ ಎಂದು ತೋರುತ್ತದೆ. ಉಕ್ರೇನ್‍ನಲ್ಲಿ ಮೃತಪಟ್ಟವರಲ್ಲಿ ಫ್ರಾನ್ಸ್ ಪ್ರಜೆಗಳ ಸಂಖ್ಯೆ ಹೆಚ್ಚಿರುವುದನ್ನು ನಾವು ಗಮನಿಸಿದ್ದೇವೆ ಎಂದವರು ಹೇಳಿದ್ದಾರೆ.
ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್‍ನಿಂದ ಬೆದರಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಮಿಲಿಟರಿ ಸಮರಾಭ್ಯಾಸದ ಭಾಗವಾಗಿ ಕಾರ್ಯತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸಲಾಗುವುದು ಎಂದು ರಶ್ಯ ಸೋಮವಾರ ಹೇಳಿತ್ತು.