ಪಾಕ್ ಸಂಸತ್ ವಿಸರ್ಜನೆ: ಚುನಾವಣೆ 2024ಕ್ಕೆ ಮುಂದೂಡುವ ಸಾಧ್ಯತೆ
ಶಹಬಾಝ್ ಶರೀಫ್ | Photo: PTI
ಇಸ್ಲಾಮಾಬಾದ್: ಪಾಕಿಸ್ತಾನದ ರಾಷ್ಟ್ರೀಯ ಸಂಸತ್ ಅನ್ನು ಗುರುವಾರ ವಿಸರ್ಜಿಸಲಾಗಿದ್ದು, ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ನಡೆಸಿಕೊಡಲು ಪ್ರಧಾನಿ ಶಹಬಾಝ್ ಶರೀಫ್ ಅವರು ಅಧಿಕಾರವನ್ನು ಹಂಗಾಮಿ ಸರಕಾರಕ್ಕೆ ಹಸ್ತಾಂತರಿಸಿದ್ದಾರೆ. ಈ ಮಧ್ಯೆ ಸಂಸತ್ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದನ್ನು ನಿಷೇಧಿಸುವುದಕ್ಕೆ ಕಾರಣವಾದ ತನ್ನ ಜೈಲು ಶಿಕ್ಷೆಯ ಕುರಿತ ತೀರ್ಪನ್ನು ಪರಾಮರ್ಶಿಸುವಂತೆ ಕೋರಿ ಪ್ರತಿಪಕ್ಷವಾದ ಪಾಕಿಸ್ತಾನ ತೆಹ್ರಿಕೆ ಇನ್ಸಾಫ್ ಪಕ್ಷದ ಅಧ್ಯಕ್ಷ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.
ಪಾಕಿಸ್ತಾನದ ನೂತನ ಜನಸಂಖ್ಯಾ ದತ್ತಾಂಶವು ದೇಶದ ವಯಸ್ಕರ ದತ್ತಾಂಶದಲ್ಲಿ ಶೇ.16ರಷ್ಟು ಹೆಚ್ಚಳವಾಗಿರುವುದನ್ನು ತೋರಿಸಿರುವ ಹಿನ್ನೆಲೆಯಲ್ಲಿ ಮತದಾರ ಪಟ್ಟಿಗೆ ಹೊಸ ಮತದಾರರ ಸೇರ್ಪಡೆ ಪ್ರಕ್ರಿಯೆಗೆ ಕಾಲವಕಾಶ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪ್ರಾಂತೀಯ ಅಸೆಂಬ್ಲಿ ಹಾಗೂ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಯನ್ನು ಮುಂದಿನ ವರ್ಷಕ್ಕೆ ಮುಂದೂಡುವ ಸಾಧ್ಯತೆಯಿದೆಯೆಂದು ಶರೀಫ್ ತಿಳಿಸಿದ್ದಾರೆ.
ಹಿಂದಿನ ಇಮ್ರಾನ್ ಸರಕಾರದ ದುರಾಡಳಿತವು ತನ್ನ ಸರಕಾರದ ವೈಫಲ್ಯಕ್ಕೆ ಕಾರಣವಾಯಿತೆಂದು ಪ್ರಧಾನಿ ಶಹಬಾಝ್ ಶರೀಫ್ ಆಪಾದಿಸಿದರು. ಕಳೆದ ವರ್ಷ ನಡೆದ ಅವಿಶ್ವಾಸ ನಿರ್ಣಯದಲ್ಲಿ ಇಮ್ರಾನ್ ಖಾನ್ ಸರಕಾರ ಪತನಗೊಂಡಿತ್ತು.
‘‘ದೇಶವು ತೀವ್ರವಾದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು, ತೈಲ ಬೆಲೆಗಳು ಗಗನಕ್ಕೇರಿವೆ ಹಾಗೂ ರಾಜಕೀಯ ಅವ್ಯವಸ್ಥೆ ನೆಲೆಸಿದೆ. ಇದಕ್ಕೆ ಹಿಂದಿನ ಇಮ್ರಾನ್ ಖಾನ್ ಸರಕಾರವೇ ಹೊಣೆ’’ ಎಂದು ಶರೀಫ್ ತಿಳಿಸಿದರು.