ಅಮೆರಿಕದ ಗಡಿಯಾಚೆ ಹೋಗಬೇಡಿ; ವಲಸೆ ಅಧಿಕಾರಿಗಳಿಂದ ಕಟ್ಟುನಿಟ್ಟಿನ ಸೂಚನೆ

ಸಾಂದರ್ಭಿಕ ಚಿತ್ರ PC: freepik
ವಾಷಿಂಗ್ಟನ್: ಎಚ್-1ಬಿ ವೀಸಾ ಹೊಂದಿ ಅಮೆರಿಕದಲ್ಲಿ ವಾಸ ಇರುವವರು ಮತ್ತು ಅವರ ಕುಟುಂಬ ಸದಸ್ಯರು, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ಗ್ರೀನ್ ಕಾರ್ಡ್ ಹೊಂದಿರುವವರು ಕೂಡಾ ದೇಶದ ಗಡಿಯಾಚೆ ಪ್ರಯಾಣ ಬೆಳೆಸದಂತೆ ಅಮೆರಿಕದ ಇಮಿಗ್ರೇಶನ್ ಅಟಾರ್ನಿಗಳು ಸಲಹೆ ಮಾಡಿದ್ದಾರೆ. ಪ್ರಸ್ತಾವಿತ ಪ್ರವಾಸ ನಿಷೇಧಿತ ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರು ಇಲ್ಲದಿದ್ದರೂ, ಅಮೆರಿಕದಲ್ಲಿ ವಾಸವಿರುವ ಹೊರದೇಶಗಳ ನಾಗರಿಕರಿಗೆ ಭೀತಿಯ ಕಾರ್ಮೋಡ ಕವಿದಿದೆ.
ಅಮೆರಿಕಕ್ಕೆ ವಾಪಸ್ಸಾಗುವ ವೇಳೆ ತವರು ದೇಶಗಳಲ್ಲಿರುವ ಅಮೆರಿಕನ್ ಕಾನ್ಸುಲೇಟ್ ಗಳಲ್ಲಿ ಸ್ಟ್ಯಾಂಪಿಂಗ್ ಪ್ರಕ್ರಿಯೆ ವಿಳಂಬವಾಗುತ್ತಿರುವುದು, ತೀವ್ರ ಪರಿಶೀಲನೆ ಮತ್ತು ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ಬಂಧನ ಸೇರಿದಂತೆ ಪೂರಕ ಹೆಚ್ಚುವರಿ ತಪಾಸಣೆಗಳ ಹಿನ್ನೆಲೆಯಲ್ಲಿ ವಿದೇಶಗಳಿಗೆ ಪ್ರಯಾಣ ಬೆಳೆಸದಂತೆ ಸೂಚನೆ ನೀಡಲಾಗಿದೆ.
"ಇದು ನಿರ್ದಯ ಕ್ರಮ ಎನಿಸಬಹುದು; ಆದರೆ ವಿದೇಶಿಯರು ಅದರಲ್ಲೂ ಮುಖ್ಯವಾಗಿ ಎಚ್-1ಬಿ ಅಥವಾ ಎಫ್-1 ವೀಸಾಗಳ ನವೀಕರಣ ಅಗತ್ಯವಿರುವವರು ತಕ್ಷಣಕ್ಕೆ ಅಮೆರಿಕದಿಂದ ತೆರಳುವ ಬಗ್ಗೆ ಎರಡು ಬಾರಿ ಯೋಚಿಸಬೇಕಾದ ಅಗತ್ಯವಿದೆ" ಎಂದು ಸಿಯಾಟೆಲ್ ಇಮಿಗ್ರೇಶನ್ ಅಟಾರ್ನಿ ಕೃಪಾ ಉಪಾಧ್ಯಾಯ ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ರಕ್ಷಣಾ ಇಲಾಖೆ ಸಂದರ್ಶನ ವಿನಾಯ್ತಿ ಅರ್ಹತೆ ಪಡೆಯುವ ಅಗತ್ಯತೆಗಳ ಪಟ್ಟಿಯನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಿದೆ. ಈ ಮೊದಲು ಯಾವುದೇ ವರ್ಗದಲ್ಲಿ ನಾನ್-ಇಮಿಗ್ರೆಂಟ್ ವೀಸಾ ಹೊಂದಿದವರಿಗೆ ಮತ್ತು ವೀಸಾ ಅವಧಿ ಮುಕ್ತಾಯದ 48 ತಿಂಗಳ ಒಳಗಾಗಿ ಅರ್ಜಿ ಸಲ್ಲಿಸುವವರಿಗೆ ಸಂದರ್ಶನದಿಂದ ವಿನಾಯ್ತಿ ಇತ್ತು. ಆದರೆ ಪರಿಷ್ಕೃತ ನಿಯಮಾವಳಿಯಲ್ಲಿ ಈ ಅವಧಿಯನ್ನು 12 ತಿಂಗಳಿಗೆ ಇಳಿಸಲಾಗಿದೆ. ಅಂದರೆ ಎಫ್-1 ವೀಸಾ ಹೊಂದಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಕೂಡಾ ಎಚ್-1ಬಿ ವೀಸಾ ಬೇಕಿದ್ದಲ್ಲಿ ಸಂದರ್ಶನದ ಅವಧಿಗೆ ಕಾಯಬೇಕಾಗುತ್ತದೆ. ನೀವು ಎಚ್-1ಬಿ ವೀಸಾ ಹೊಂದಿದ್ದು, ಇದರ ವಿಸ್ತರಣೆಯಾಗಬೇಕಿದ್ದರೆ ಕೂಡಾ, ನಿಮ್ಮ ಹಿಂದಿನ ವೀಸಾವನ್ನು 12 ತಿಂಗಳ ಹಿಂದೆ ನೀಡಿದ್ದರೆ, ನೀವು ಕೂಡಾ ಸಂದರ್ಶನಕ್ಕಾಗಿ ಕಾಯಬೇಕಾಗುತ್ತದೆ ಎಂದು ಉಪಾಧ್ಯಾಯ ವಿವರಿಸಿದ್ದಾರೆ.
ವೀಸಾ ನೀಡುವ ಮುನ್ನ ಸಂದರ್ಶನ ಲಭ್ಯತೆಯಲ್ಲಿ ವಿಳಂಬ ಆತಂಕಕ್ಕೆ ಕಾರಣವಾಗಿದೆ. ಹೆಚ್ಚುವರಿ ಮೇಲ್ತನಿಖೆ ಮತ್ತು ಭದ್ರತಾ ಅನುಮತಿ ಹೊರತುಪಡಿಸಿ ಯಾವುದೇ ಸಕಾರಣ ಇಲ್ಲದಿದ್ದರೂ ಆಡಳಿತಾತ್ಮಕ ಪ್ರಕ್ರಿಯೆಯಲ್ಲಿ ವ್ಯಕ್ತಿಗಳು ಸಿಲುಕಬೇಕಾದ ಅನಿವಾರ್ಯತೆ ಇದೆ ಎಂದು ಎನ್ ಪಿಝೆಡ್ ಲಾ ಗ್ರೂಪ್ ಅಟಾರ್ನಿ ಸ್ನೇಹಲ್ ಬಾತ್ರಾ ಹೇಳಿದ್ದಾರೆ.