ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದರೆ ತೈವಾನ್ `ತಿರಸ್ಕೃತ' ಮಗು ಆಗಬಹುದು : ಚೀನಾ ಸರಕಾರದ ಪ್ರತಿಕ್ರಿಯೆ
ಡೊನಾಲ್ಡ್ ಟ್ರಂಪ್ (PTI)
ಬೀಜಿಂಗ್: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷನಾದರೆ ತೈವಾನ್ ಅನ್ನು ಖಂಡಿತಾ ತಿರಸ್ಕರಿಸುತ್ತಾರೆ. ಆಗ ತೈವಾನ್ ಅಮೆರಿಕಕ್ಕೆ ಇಷ್ಟವಿಲ್ಲದ `ತಿರಸ್ಕೃತ ಮಗು' ಆಗುತ್ತದೆ ಎಂದು ಚೀನಾ ಸರಕಾರ ಬುಧವಾರ ಹೇಳಿದೆ.
ರಿಪಬ್ಲಿಕನ್ ಅಭ್ಯರ್ಥಿಯಾಗಿರುವ ಟ್ರಂಪ್ ಹಲವು ಪ್ರಚಾರ ಸಭೆಗಳಲ್ಲಿ `ಚೀನಾ ಹಕ್ಕು ಸಾಧಿಸುತ್ತಿರುವ ತೈವಾನ್ ನ ರಕ್ಷಣೆಗಾಗಿ ಆ ದ್ವೀಪವು ಅಮೆರಿಕಕ್ಕೆ ಶುಲ್ಕ ಪಾವತಿಸಬೇಕು' ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ. ಅಲ್ಲದೆ ತೈವಾನ್ ಅಮೆರಿಕದ ಸೆಮಿಕಂಡಕ್ಟರ್ ವ್ಯಾಪಾರವನ್ನು ಕದಿಯುತ್ತಿದೆ ಎಂದು ಆರೋಪಿಸಿದ್ದಾರೆ.
ಚೀನಾವು ತೈವಾನ್ ಅನ್ನು ವಶಕ್ಕೆ ಪಡೆದರೆ ಚೀನಾದ ಮೇಲೆ ಹೆಚ್ಚುವರಿ, ಬೃಹತ್ ಸುಂಕಗಳನ್ನು ವಿಧಿಸುವುದಾಗಿ ಕಳೆದ ತಿಂಗಳು ಟ್ರಂಪ್ ಹೇಳಿದ್ದರು. ಈ ಹೇಳಿಕೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ತೈವಾನ್ ವ್ಯವಹಾರಗಳ ಇಲಾಖೆಯ ವಕ್ತಾರ ಝು ಫೆಂಗ್ಲಿಯಾನ್ `ತೈವಾನ್ ನ ಜನತೆ ಅಮೆರಿಕದ ನೀತಿಯ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ಹೊಂದಿದ್ದಾರೆ. ಅಮೆರಿಕವು ತೈವಾನನ್ನು ರಕ್ಷಿಸುತ್ತದೆಯೇ ಅಥವಾ ಹಾನಿ ಮಾಡುತ್ತದೆಯೇ ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ. ಅದೇನೇ ಇರಲಿ, ತೈವಾನ್ ನ ನಮ್ಮ ಬಹುತೇಕ ದೇಶವಾಸಿಗಳು ಈಗಾಗಲೇ ತರ್ಕಬದ್ಧ ಯೋಚನೆ ಮಾಡಿದ್ದಾರೆ ಮತ್ತು ಅಮೆರಿಕ ಯಾವತ್ತೂ `ಅಮೆರಿಕ ಮೊದಲು' ಎಂಬ ನೀತಿಯನ್ನೇ ಅನುಸರಿಸುತ್ತದೆ. ಅಮೆರಿಕದ ಹಿತಾಸಕ್ತಿಗಳಿಗೆ ಮೊದಲ ಆದ್ಯತೆ ನೀಡುತ್ತದೆ ಎಂಬುದನ್ನು ಅರಿತಿದ್ದಾರೆ. ತೈವಾನ್ ಅನ್ನು ದಾಳವಾಗಿ ಬಳಸಿಕೊಳ್ಳುತ್ತಿರುವ ಅಮೆರಿಕ, ತನಗೆ ಲಾಭವಾದರೆ ಯಾವ ಸಮಯದಲ್ಲೂ ತೈವಾನ್ ಅನ್ನು ಕೈಬಿಡಲಿದೆ. ಆಗ ತೈವಾನ್ `ತಿರಸ್ಕೃತ ಮಗು'ವಾಗಲಿದೆ ಎಂದಿದ್ದಾರೆ.