"ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ಭಾರೀ ಪರಿಣಾಮ ಎದುರಿಸಬೇಕಾಗುತ್ತದೆ": ಹಮಾಸ್ ಗೆ ಟ್ರಂಪ್ ಎಚ್ಚರಿಕೆ
ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್: ಅಧಿಕಾರ ವಹಿಸಿಕೊಳ್ಳುವ ವೇಳೆಗೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ಭಾರೀ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷರಾಗಿ ಇತ್ತೀಚೆಗೆ ಚುನಾಯಿತರಾದ ಡೊನಾಲ್ಡ್ ಟ್ರಂಪ್ ಹಮಾಸ್ ಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಒತ್ತಾಯಾಳುಗಳ ಬಿಡುಗಡೆ ಮತ್ತು ಗಾಝಾ- ಇಸ್ರೇಲ್ ನಡುವಿನ ಕದನ ವಿರಾಮಕ್ಕೆ ಜೋ ಬೈಡನ್ ಅವರ ಆಡಳಿತ ವಿಫಲವಾಗಿದೆ. ನಾನು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ 2025ರ ಜನವರಿ 20ರ ಮೊದಲು ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ, ಮಾನವೀಯತೆಯ ವಿರುದ್ಧ ಯಾರು ಈ ಅಪರಾಧವನ್ನು ಮಾಡಿದ್ದಾರೆ ಅವರು ಈ ಬಗ್ಗೆ ಬೆಲೆ ತೆರಬೇಕಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
ಈ ವಿಷಯದ ಕುರಿತು ಹಿಂದಿನ ಮಾತುಕತೆಗಳನ್ನು ಟ್ರಂಪ್ ಟೀಕಿಸಿದ್ದು, ಒತ್ತೆಯಾಳುಗಳಿಗೆ ಸಂಬಂಧಿಸಿ ಈ ಹಿಂದೆ ಮಾತುಕತೆಗಳು ನಡೆದಿದೆ. ಆದರೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಪರಿಸ್ಥಿತಿಯು ಹಿಂಸಾತ್ಮಕ ಮತ್ತು ಅಮಾನವೀಯ. ಎಲ್ಲರೂ ಮಧ್ಯಪ್ರಾಚ್ಯದಲ್ಲಿ ಹಿಂಸಾತ್ಮಕವಾಗಿ, ಅಮಾನವೀಯವಾಗಿ ಮತ್ತು ಇಡೀ ಪ್ರಪಂಚದ ಇಚ್ಛೆಗೆ ವಿರುದ್ಧವಾಗಿ ಹಿಡಿದಿಟ್ಟುಕೊಂಡಿರುವ ಒತ್ತೆಯಾಳುಗಳ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅದೆಲ್ಲಾ ಬರೀ ಚರ್ಚೆಯಾಗಿದೆ ಮತ್ತು ಯಾವುದೇ ಕ್ರಮವನ್ನು ಕೈಗೊಳ್ಳಲಾಗಿಲ್ಲ. ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಳ್ಳಲು ಕಾರಣರಾದವರ ವಿರುದ್ಧ ಅತ್ಯಂತ ಕಠಿಣ ಕ್ರಮವನ್ನು ಕೈಗೊಳ್ಳುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.