ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಿವಾಸದ ಮೇಲೆ ಲೆಬನಾನ್ ನಿಂದ ಡ್ರೋನ್ ದಾಳಿ : ವರದಿ
Photo : timesofisrael.com
ಜೆರುಸಲೇಂ : ಹಮಾಸ್ ನಾಯಕ ಯಹ್ಯಾ ಸಿನ್ವರ್ ಹತ್ಯೆಯ ಬೆನ್ನಿಗೇ, ಶನಿವಾರ ಇಸ್ರೇಲ್ ನಗರವಾದ ಸಿಸೇರಿಯಾದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಿವಾಸವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನೆತನ್ಯಾಹು ವಕ್ತಾರರು, ಈ ಘಟನೆಯ ಸಂದರ್ಭದಲ್ಲಿ ನೆತನ್ಯಾಹು ಸ್ಥಳದಲ್ಲಿರಲಿಲ್ಲ ಹಾಗೂ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ.
“ಸಿಸೇರಿಯಾದಲ್ಲಿರುವ ಪ್ರಧಾನಿಗಳ ನಿವಾಸದತ್ತ ಮಾನವರಹಿತ ಡ್ರೋನ್ ಹಾರಿ ಬಿಡಲಾಗಿತ್ತು. ಈ ಸಂದರ್ಭದಲ್ಲಿ ಪ್ರಧಾನಿ ಹಾಗೂ ಅವರ ಪತ್ನಿ ಸ್ಥಳದಲ್ಲಿರಲಿಲ್ಲ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ” ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದಕ್ಕೂ ಮುನ್ನ, ಲೆಬನಾನ್ ಉಡಾಯಿಸಿದ್ದ ಡ್ರೋನ್ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದಿದೆ. ಇಸ್ರೇಲ್ ಗಡಿಯನ್ನು ದಾಟಿದ್ದ ಇನ್ನೆರಡು ಡ್ರೋನ್ ಗಳನ್ನು ಮಾರ್ಗಮಧ್ಯದಲ್ಲೇ ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್ ಸೇನಾಪಡೆ ಹೇಳಿದೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದ ಅಕ್ಟೋಬರ್ ತಿಂಗಳಿನಿಂದ ಇಸ್ರೇಲ್ ನೊಂದಿಗೆ ಕಾಳಗ ನಡೆಸುತ್ತಿರುವ ಹಿಝ್ಬುಲ್ಲಾ, ತಕ್ಷಣವೇ ಈ ಡ್ರೋನ್ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಹಾಗೆಯೇ ಇತರ ಯಾವುದೇ ಗುಂಪುಗಳೂ ಈ ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ