ಮಾದಕವಸ್ತು ಕಳ್ಳಸಾಗಣೆ: ದಕ್ಷಿಣ ಕೊರಿಯಾ ಪ್ರಜೆಗೆ ಗಲ್ಲುಶಿಕ್ಷೆ ವಿಧಿಸಿದ ಚೀನಾ
Photo : ಚೀನೀ ಧ್ವಜ | PTI
ಬೀಜಿಂಗ್: ಮಾದಕವಸ್ತು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಕೊರಿಯಾದ ಪ್ರಜೆಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ ಎಂದು ಚೀನಾ ಶನಿವಾರ ಘೋಷಿಸಿದೆ.
ದಕ್ಷಿಣ ಕೊರಿಯಾದ ಪ್ರಜೆ ಜಿಯಾಂಗ್ ಎಂಬವನನ್ನು ಚೀನಾದಲ್ಲಿ 2014ರಲ್ಲಿ ಮಾದಕವಸ್ತು ಸಹಿತ ಬಂಧಿಸಲಾಗಿತ್ತು. 2019ರಲ್ಲಿ ಆತನಿಗೆ ಮರಣದಂಡನೆ ಶಿಕ್ಷೆ ಘೋಷಿಸಲಾಗಿತ್ತು. ಇದರಂತೆ, ದಕ್ಷಿಣ ಚೀನಾದ ಗ್ವಾಂಗ್ಝಾವೊ ನಗರದ ಕೋರ್ಟ್ನಲ್ಲಿ ಶುಕ್ರವಾರ ಕಾನೂನುಬದ್ಧವಾಗಿ ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ. ವಿವಿಧ ರಾಷ್ಟ್ರೀಯತೆಗಳ ಪ್ರತಿವಾದಿಗಳು ಚೀನಾದ ಭೂಪ್ರದೇಶದಲ್ಲಿ ಅಪರಾಧಗಳನ್ನು ಮಾಡಿದಾಗ ಚೀನೀ ಕಾನೂನುಗಳನ್ನು ಸಮಾನವಾಗಿ ಅನ್ವಯಿಸಲಾಗುತ್ತದೆ ಎಂದು ಚೀನಾದ ವಿದೇಶಾಂಗ ಇಲಾಖೆ ಹೇಳಿಕೆ ನೀಡಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ದಕ್ಷಿಣ ಕೊರಿಯಾ ಸರಕಾರ `ಮರಣದಂಡನೆ ಶಿಕ್ಷೆಯ ಬಗ್ಗೆ ಮರುಪರಿಶೀಲಿಸಲು ಅಥವಾ ಅದನ್ನು ಮುಂದೂಡುವಂತೆ ಚೀನಾ ಸರಕಾರಕ್ಕೆ ಹಲವು ಬಾರಿ ಮನವಿ ಮಾಡಿಕೊಂಡ ಹೊರತಾಗಿಯೂ ನಮ್ಮ ಪ್ರಜೆಯನ್ನು ಚೀನಾದಲ್ಲಿ ಗಲ್ಲಿಗೇರಿಸಿರುವುದು ವಿಷಾದನೀಯ' ಎಂದು ಹೇಳಿದೆ.
ಜಗತ್ತಿನಲ್ಲಿ ಅತೀ ಹೆಚ್ಚು ಮರಣದಂಡನೆ ಶಿಕ್ಷೆ ಜಾರಿಗೊಳ್ಳುವ ದೇಶವಾಗಿರುವ ಚೀನಾದಲ್ಲಿ ಗಂಭೀರ ಅಪರಾಧ ಎಂದು ನಿರ್ಧರಿಸಲ್ಪಟ್ಟ ಎಲ್ಲಾ ಪ್ರಕರಣಗಳಲ್ಲೂ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ.