ನಾರ್ವೆಯಲ್ಲಿ ರನ್ ವೇಯಿಂದ ಜಾರಿದ 182 ಪ್ರಯಾಣಿಕರಿದ್ದ ಡಚ್ ಏರ್ ಲೈನ್ಸ್ ವಿಮಾನ
Photo | X/@aviationsafety
ಓಸ್ಲೋ : 182 ಪ್ರಯಾಣಿಕರಿದ್ದ KLM ರಾಯಲ್ ಡಚ್ ಏರ್ ಲೈನ್ಸ್ ವಿಮಾನವು ನಾರ್ವೆಯ ಓಸ್ಲೋ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ಹೈಡ್ರಾಲಿಕ್ ವೈಫಲ್ಯ ಕಂಡು ಬಂದ ಹಿನ್ನೆಲೆ ನಾರ್ವೆಯ ಸ್ಯಾಂಡೆಫ್ ಜೋರ್ಡ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು, ಈ ವೇಳೆ ವಿಮಾನವು ರನ್ ವೇಯಿಂದ ಜಾರಿದೆ ಎಂದು ವರದಿಯಾಗಿದೆ.
ಆಮ್ ಸ್ಟರ್ ಡ್ಯಾಮ್ ಗೆ ತೆರಳುತ್ತಿದ್ದ ಬೋಯಿಂಗ್ 737-800 ವಿಮಾನ ಓಸ್ಲೋದಿಂದ ದಕ್ಷಿಣಕ್ಕೆ 110 ಕಿಲೋಮೀಟರ್ ದೂರದಲ್ಲಿರುವ ಸ್ಯಾಂಡೆಫ್ ಜೋರ್ಡ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಕೆಳಗಿಳಿದಿದೆ. ಆದರೆ ಲ್ಯಾಂಡಿಂಗ್ ರೋಲ್ ಔಟ್ ಸಮಯದಲ್ಲಿ ವಿಮಾನವು ನಿಯಂತ್ರಣವನ್ನು ಕಳೆದುಕೊಂಡಿದೆ.
ಅಧಿಕಾರಿಗಳ ಪ್ರಕಾರ, ವಿಮಾನವು ರನ್ ವೇಯಿಂದ ಜಾರಿ ಟ್ಯಾಕ್ಸಿವೇ ಬಳಿ ಮೃದುವಾದ ಹುಲ್ಲಿನಲ್ಲಿ ನಿಂತಿದೆ. ವಿಮಾನದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಸೇರಿದಂತೆ 182 ಜನರಿದ್ದರು. ಆದರೆ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಸಿಬ್ಬಂದಿಗಳು ತುರ್ತು ಕಾರ್ಯಾಚರಣೆಯನ್ನು ನಡೆಸಿ ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ.
ಘಟನೆಯ ಕುರಿತು KLM ಇನ್ನು ಕೂಡ ಯಾವುದೇ ಹೇಳಿಕೆಯನ್ನು ನೀಡಿಲ್ಲ.