ದೀರ್ಘಕಾಲದಲ್ಲಿ ನಿರಂತರವಾಗಿ ಬದಲಾಗಲಿರುವ ಭೂ ತಾಪಮಾನ : ಸಂಶೋಧನಾ ವರದಿ
Photo : PTI
ಹೊಸದಿಲ್ಲಿ : ಭೂ ತಾಪಮಾನ ಏರಿಕೆಯ ಬಗ್ಗೆ ಜಗತ್ತಿನಾದ್ಯಂತ ಕಳವಳ ವ್ಯಕ್ತವಾಗುತ್ತಿದ್ದು, 2060ರ ವೇಳೆಗೆ ಶೂನ್ಯ ಪ್ರಮಾಣದ ಅನಿಲ ಹೊಸ ಸೂಸುವಿಕೆಯನ್ನು ಸಾಧಿಸಲು ಜಾಗತಿಕ ಹವಾಮಾನ ಒಪ್ಪಂದವೂ ಏರ್ಪಟ್ಟಿದೆ. ಆದರೆ, ಒಂದು ವೇಳೆ ಮಾನವ ಜನಾಂಗವು 2060ರ ವೇಳೆಗೆ ಶೂನ್ಯ ಅನಿಲ ಹೊಸ ಸೂಸುವಿಕೆ ಗುರಿಯನ್ನು ತಲುಪಿದರೆ, ಭೂ ತಾಪಮಾನವು ದೀರ್ಘಕಾಲದಲ್ಲಿ ನಿರಂತರವಾಗಿ ಬದಲಾವಣೆಯಾಗಲಿದೆ ಎಂಬ ಮಾಹಿತಿ ಸಂಶೋಧನೆಯೊಂದರಲ್ಲಿ ಬಹಿರಂಗಗೊಂಡಿದೆ.
ಮೆಲ್ಬೋರ್ನ್ ವಿಶ್ವವಿದ್ಯಾಲಯದಲ್ಲಿ ಹವಾಮಾನ ವಿಜ್ಞಾನದ ಹಿರಿಯ ಉಪನ್ಯಾಸಕ ಆ್ಯಂಡ್ರ್ಯೂ ಕಿಂಗ್ ಹಾಗೂ ಸಿಎಸ್ಐಆರ್ಒನಲ್ಲಿ ಪ್ರಾಂಶುಪಾಲ ಹಾಗೂ ಸಂಶೋಧನಾ ವಿಜ್ಞಾನಿ ತಿಲೊ ಝೈನ್ ನಡೆಸಿರುವ ಸಂಶೋಧನೆಯಲ್ಲಿ ಈ ಸಂಗತಿ ಬಯಲಾಗಿದ್ದು, ಒಂದು ವೇಳೆ ಮಾನವ ಜನಾಂಗವೇನಾದರೂ ಶೂನ್ಯ ಅನಿಲ ಹೊರ ಸೂಸುವಿಕೆಯ ಗುರಿಯನ್ನು ತಲುಪಿದರೆ, ಭೂ ತಾಪಮಾನವು ಶತಮಾನಗಳ ಕಾಲ ನಿರಂತರವಾಗಿ ಬದಲಾಗಲಿದೆ ಎಂದು ಪ್ರತಿಪಾದಿಸಲಾಗಿದೆ.
ಉದಾಹರಣೆಗೆ, 2060ರ ವೇಳೆಗೆ ಶೂನ್ಯ ಅನಿಲ ಹೊಸ ಸೂಸುವಿಕೆ ಗುರಿಯನ್ನು ತಲುಪಿದರೆ, ಆಸ್ಟ್ರೇಲಿಯ ನಗರವಾದ ಮೆಲ್ಬೋರ್ನ್ ನ ತಾಪಮಾನವು ಆ ವೇಳೆಗೆ ಮತ್ತೆ 1 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ. ನಿರಂತರವಾಗಿ ಬದಲಾಗುವ ಹವಾಮಾನವು ಜಗತ್ತಿನಾದ್ಯಂತ ಏಕಸ್ವರೂಪದಲ್ಲೂ ಇರುವುದಿಲ್ಲ ಎನ್ನಲಾಗಿದೆ. ಜಗತ್ತಿನ ಬೇರೆಲ್ಲ ಪ್ರದೇಶಗಳಿಗಿಂತ ಆಸ್ಟ್ರೇಲಿಯದಲ್ಲಿ ಹೆಚ್ಚು ಬಿಸಿಯೇರಲಿದೆ ಎಂದು ಊಹಿಸಲಾಗಿದೆ.
ಇದರರ್ಥ ಜಗತ್ತು ಶೂನ್ಯ ಹೊಸ ಸೂಸುವಿಕೆ ಗುರಿಯನ್ನು ತಲುಪಬಾರದು ಎಂದೂ ಅಲ್ಲ. ಆದರೆ, ಎಷ್ಟು ಬೇಗ ಆ ಗುರಿಯನ್ನು ತಲುಪುತ್ತೇವೊ ಅಷ್ಟು ಬೇಗ ದೀರ್ಘಾವಧಿಯಲ್ಲಿ ಭೂಮಿಯು ಕಡಿಮೆ ಅಪಾಯದ ಬದಲಾವಣೆಯನ್ನು ಅನುಭವಿಸುತ್ತದೆ ಎಂದು ಹೇಳಲಾಗಿದೆ.
ಈ ನಡುವೆ, ನಿವ್ವಳ ಶೂನ್ಯ ಅನಿಲ ಹೊಸ ಸೂಸುವಿಕೆ ಗುರಿಯನ್ನು ತಲುಪುವುದು ಅತ್ಯಗತ್ಯವಾಗಿದೆ. ಜಾಗತಿಕ ಹಸಿರು ಮನೆ ಅನಿಲಗಳ ಹೊರ ಸೂಸುವಿಕೆ 2023ರಲ್ಲಿ ಗರಿಷ್ಠ ಪ್ರಮಾಣದಲ್ಲಿತ್ತು. ಇದೇ ಅವಧಿಯಲ್ಲಿ ಭೂಮಿ ಕೂಡಾ ಹೆಚ್ಚು ತಾಪಮಾನ ಅನುಭವಿಸಿತು.
ವಿಶ್ಲೇಷಣೆಗಳ ಪ್ರಕಾರ, ಮುಂದಿನ ಕೆಲ ವರ್ಷಗಳಲ್ಲಿ ಅನಿಲ ಹೊರ ಸೂಸುವಿಕೆ ಗರಿಷ್ಠ ಪ್ರಮಾಣಕ್ಕೆ ತಲುಪಿ, ನಂತರ ಕುಸಿತ ಕಾಣಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಎಲ್ಲಿಯವರೆಗೆ ಅನಿಲ ಹೊರ ಸೂಸುವಿಕೆ ಪ್ರಮಾಣ ಗಮನಾರ್ಹವಾಗಿರುತ್ತದೊ, ಅಲ್ಲಿಯವರೆಗೆ ಭೂಮಿಯ ತಾಪಮಾನ ಏರಿಕೆಯಾಗುತ್ತಲೇ ಇರುತ್ತದೆ ಎನ್ನಲಾಗಿದೆ.
ಆಸ್ಟ್ರೇಲಿಯ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳು ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಸಹಿ ಮಾಡಿವೆ. ಈ ಒಪ್ಪಂದವು ಭೂಮಿಯ ತಾಪಮಾನದ ಏರಿಕೆಯನ್ನು 2 ಡಿಗ್ರಿ ಸೆಲ್ಸಿಯಸ್ ನೊಳಗೆ ನಿಯಂತ್ರಿಸುವ ಉದ್ದೇಶ ಹೊಂದಿದ್ದು, ಪ್ರಮುಖ ಅನಿಲ ಹೊಸ ಸೂಸುವ ದೇಶಗಳು ಎಷ್ಟು ಬೇಗ ಸಾಧ್ಯವೊ ಅಷ್ಟು ಬೇಗ ನಿವ್ವಳ ಶೂನ್ಯ ಹೊರ ಸೂಸುವಿಕೆ ಪ್ರಮಾಣವನ್ನು ತಲುಪಬೇಕಾಗುತ್ತದೆ. ಆಸ್ಟ್ರೇಲಿಯ ಸೇರಿದಂತೆ ಹಲವಾರು ದೇಶಗಳು ಈ ಗುರಿಯನ್ನು 2050ರ ಒಳಗೆ ತಲುಪುವ ಗುರಿ ಹೊಂದಿವೆ.
ನಿವ್ವಳ ಶೂನ್ಯ ಹೊರ ಸೂಸುವಿಕೆಯನ್ನು ಸಾಧಿಸಬೇಕಿದ್ದರೆ, ಮನುಷ್ಯ ನಿರ್ಮಿತ ಹಸಿರು ಅನಿಲ ಹೊರ ಹೊಮ್ಮುವಿಕೆಯನ್ನು ಎಷ್ಟು ಸಾಧ್ಯವೊ ಅಷ್ಟು ತಗ್ಗಿಸಬೇಕಾಗುತ್ತದೆ. ಉಳಿದ ಹೊರ ಸೂಸುವಿಕೆಯನ್ನು ವಾತಾವರಣದಿಂದ ಹಸಿರು ಅನಿಲಗಳನ್ನು ಬೇರೆಗೆ ಸ್ಥಳಾಂತರಿಸುವ ಮೂಲಕ ಪರಿಹರಿಸಬೇಕಾಗುತ್ತದೆ. ಈ ವಿಧಾನಗಳಲ್ಲಿ ಹೆಚ್ಚುವರಿ ಸಸಿಗಳ ನೆಡುವಿಕೆಯ ಮೂಲಕ ಇಂಗಾಲವನ್ನು ಹೀರಿಕೊಂಡು, ಸಂಗ್ರಹಿಸಿಟ್ಟುಕೊಳ್ಳುವ ವಿಧಾನವೂ ಸೇರಿದೆ. ಅಥವಾ ಇಂಗಾಲವನ್ನು ಗಾಳಿಯಿಂದ ಹೀರಿಕೊಳ್ಳುವಂಥ ತಂತ್ರಜ್ಞಾನದ ಬಳಕೆಯೂ ಸೇರಿದೆ.
ಮತ್ತಷ್ಟು ವಿಧಾನಗಳ ಮೂಲಕ ಪ್ರಯೋಗಗಳನ್ನು ನಡೆಸುವುದರಿಂದ ನಿವ್ವಳ ಶೂನ್ಯ ಅನಿಲ ಹೊರ ಸೂಸುವಿಕೆಯನ್ನು ಸಾಧಿಸಿದ ನಂತರ ಹವಾಮಾನದಲ್ಲಿ ಆಗುವ ಬದಲಾವಣೆಗಳ ಕುರಿತು ವಿಜ್ಞಾನಿಗಳು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದೂ ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.
ಹೀಗಿದ್ದೂ, ಎಷ್ಟು ಬೇಗ ಸಾಧ್ಯವೊ ಅಷ್ಟು ಬೇಗ ನಿವ್ವಳ ಶೂನ್ಯ ಹೊರ ಸೂಸುವಿಕೆ ಗುರಿ ಸಾಧಿಸುವುದು ಅತ್ಯಗತ್ಯ ಎಂದೂ ಈ ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ.