ಇಬ್ರಾಹೀಮ್ ರಯೀಸಿ ಪೇಜರ್ ಬಳಸಿದ್ದರು, ಅದರ ಸ್ಫೋಟ ಹೆಲಿಕಾಪ್ಟರ್ ಪತನಕ್ಕೆ ಕಾರಣವಾಗಿರಬಹುದು: ಇರಾನ್ ಸಂಸದ
ಮಾಜಿ ಇರಾನ್ ಅಧ್ಯಕ್ಷ ಇಬ್ರಾಹೀಮ್ ರಯೀಸಿ (PTI)
ಟೆಹರಾನ್: ಮಾಜಿ ಇರಾನ್ ಅಧ್ಯಕ್ಷ ಇಬ್ರಾಹೀಮ್ ರಯೀಸಿ ಅವರೂ ಪೇಜರ್ ಬಳಸುತ್ತಿದ್ದರು ಮತ್ತು ಅದರಲ್ಲಿ ಸಂಭವಿಸಿದ ಸ್ಫೋಟ ಅವರ ಹೆಲಿಕಾಪ್ಟರ್ ಪತನಗೊಳ್ಳಲು ಕಾರಣವಾಗಿರುವ ಸಾಧ್ಯತೆಯಿದೆ ಎಂದು ಇರಾನ್ ಸಂಸತ್ ಸದಸ್ಯ ಅಹ್ಮದ್ ಬಕ್ಷಯೇಶ್ ಅರ್ಡೆಸ್ತಾನಿ ಹೇಳಿದ್ದಾರೆ. ವಾರದ ಹಿಂದೆ ಲೆಬನಾನ್ನಲ್ಲಿ ಹಿಜ್ಬುಲ್ಲಾ ಹೋರಾಟಗಾರರನ್ನು ಗುರಿಯಾಗಿಸಿಕೊಂಡು ನಡೆದಿದ್ದ ಮಾರಣಾಂತಿಕ ಪೇಜರ್ ಸ್ಫೋಟಗಳ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಹೊರಬಿದ್ದಿದೆ.
ಇರಾನಿನ ಮಾಧ್ಯಮ ಸಂಸ್ಥೆ ದಿಡ್ಬಾನ್ ಇರಾನ್ ಜೊತೆ ಮಾತನಾಡಿದ ಸಂಸತ್ತಿನ ರಾಷ್ಟ್ರೀಯ ಭದ್ರತಾ ಆಯೋಗದ ಸದಸ್ಯರೂ ಆಗಿರುವ ಅರ್ಡೆಸ್ತಾನಿ, "ರಯೀಸಿ ಅವರು ಪೇಜರ್ ಬಳಸುತ್ತಿದ್ದರು, ಅದು ಹಿಜ್ಬುಲ್ಲಾ ಪಡೆಗಳು ಹೊಂದಿದ್ದ ಪೇಜರ್ಗಳಿಗಿಂತ ಕೊಂಚ ಭಿನ್ನವಾಗಿದ್ದಿರಬಹುದು. ರಯೀಸಿ ಅವರನ್ನು ಬಲಿ ತೆಗೆದುಕೊಂಡ ಹೆಲಿಕಾಪ್ಟರ್ ಪತನಕ್ಕೆ ಅವರ ಪೇಜರ್ ಸ್ಫೋಟ ಒಂದು ಸಂಭವನೀಯ ಕಾರಣವಾಗಿರಬಹುದು" ಎಂದರು.
ಲೆಬನಾನ್ ಪೇಜರ್ ಸ್ಫೋಟ ಘಟನೆಯ ಕುರಿತು ಇರಾನ್ನಿಂದಲೂ ತನಿಖೆಗೆ ಕರೆ ನೀಡಿದ ಅರ್ಡೆಸ್ತಾನಿ, ಹಿಜ್ಬುಲ್ಲಾಗಳ ಪೇಜರ್ ಖರೀದಿಯಲ್ಲಿ ಇರಾನ್ ಪಡೆಗಳು ಖಂಡಿತವಾಗಿಯೂ ಪಾತ್ರವನ್ನು ವಹಿಸಿವೆ, ಆದ್ದರಿಂದ ಈ ಘಟನೆಯ ಬಗ್ಗೆ ನಮ್ಮ ಗುಪ್ತಚರ ಸಂಸ್ಥೆಗಳೂ ತನಿಖೆ ನಡೆಸಬೇಕು. ಇಸ್ರೇಲಿಗಳು ಲೆಬನಾನ್ನಲ್ಲಿ ಹಿಜ್ಬುಲ್ಲಾಗಳ ರಕ್ಷಣೆಯನ್ನು ಭೇದಿಸಿದ್ದಾರೆ ಎಂದರು.
ನಿರ್ಗಮನಗೊಳ್ಳುತ್ತಿರುವ ಇರಾಕ್ ಸಂಸತ್ನ ಸ್ಪೀಕರ್ ಮುಹಮ್ಮದ್ ಅಲ್-ಹಲಬೂಸಿ ಮತ್ತು ರಯೀಸಿ ನಡುವಿನ ಭೇಟಿಯ ಚಿತ್ರವೊಂದು ಇತ್ತೀಚಿಗೆ ವೈರಲ್ ಆಗಿತ್ತು,ಚಿತ್ರದಲ್ಲಿ ಟೇಬಲ್ ಮೇಲೆ ಇರಿಸಲಾಗಿದ್ದ ಪೇಜರ್ ಕೂಡ ಕಂಡು ಬಂದಿತ್ತು. ರಯೀಸಿ ಪೇಜರ್ ಬಳಸುತ್ತಿದ್ದರು ಎಂಬ ಶಂಕೆಯನ್ನು ಇದು ಹುಟ್ಟು ಹಾಕಿದೆ.
ಮೇ 19ರಂದು ರಯೀಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಜರ್ಬೈಜಾನ್ ಗಡಿ ಸಮೀಪದ ಪರ್ವತ ಪ್ರದೇಶದಲ್ಲಿ ಪತನಗೊಂಡಿತ್ತು. ಪ್ರತಿಕೂಲ ಹವಾಮಾನ ಈ ದುರಂತಕ್ಕೆ ಕಾರಣವಾಗಿತ್ತು ಎಂದು ಇರಾನಿನ ಸರಕಾರಿ ಟಿವಿ ಅಂತಿಮ ತನಿಖಾ ವರದಿಯನ್ನು ಉಲ್ಲೇಖಿಸಿ ಈ ತಿಂಗಳ ಆರಂಭದಲ್ಲಿ ತಿಳಿಸಿತ್ತು.