ಇಕ್ವೆಡಾರ್ | 8 ಪ್ರಾಂತಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ
Flag of the Ecuador | PC : freepik
ಕ್ವಿಟೊ: ಹಿಂಸಾಚಾರ ಮತ್ತು ಘರ್ಷಣೆಯಿಂದ ತತ್ತರಿಸಿರುವ ಇಕ್ವೆಡಾರ್ನ 8 ಪ್ರಾಂತಗಳಲ್ಲಿ ಅಧ್ಯಕ್ಷ ಡೇನಿಯಲ್ ನೊಬೊವ ತುರ್ತು ಪರಿಸ್ಥಿತಿಯನ್ನು ಘೋಷಿಸಿರುವುದಾಗಿ ವರದಿಯಾಗಿದೆ.
8 ಪ್ರಾಂತಗಳಲ್ಲಿ ತುರ್ತು ಪರಿಸ್ಥಿತಿ 60 ದಿನಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಅಧ್ಯಕ್ಷರ ಆದೇಶ ತಿಳಿಸಿದೆ. ಇಕ್ವೆಡಾರ್ ದೇಶವು ಯುದ್ಧದಲ್ಲಿದೆ ಎಂದು ಜನವರಿಯಲ್ಲಿ ಘೋಷಿಸಿದ್ದ ಅಧ್ಯಕ್ಷರು, 22 ಕ್ರಿಮಿನಲ್ ಗ್ಯಾಂಗ್ಗಳನ್ನು ಭಯೋತ್ಪಾದಕ ಗುಂಪುಗಳೆಂದು ಘೋಷಿಸಿದ್ದರು. ಅಧ್ಯಕ್ಷರ ಆದೇಶವನ್ನು ಸಾಂವಿಧಾನಿಕ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಸರಕಾರ ಹೇಳಿದೆ.
ಈ ಹಿಂದೆ 5 ಪ್ರಾಂತಗಳಲ್ಲಿ ಸರಕಾರ ಘೋಷಿಸಿದ್ದ ತುರ್ತು ಪರಿಸ್ಥಿತಿ ಆದೇಶವನ್ನು ಸೂಕ್ತವಾಗಿ ಸಮರ್ಥಿಸಲಾಗಿಲ್ಲ ಎಂದು ಹೇಳಿದ್ದ ನ್ಯಾಯಾಲಯ ಆದೇಶವನ್ನು ರದ್ದುಗೊಳಿಸಿತ್ತು. ತುರ್ತು ಪರಿಸ್ಥಿತಿ ಜಾರಿಗೊಳ್ಳುವ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಅನುಮತಿ ಪಡೆಯದೆ ಮನೆಗಳನ್ನು ಪ್ರವೇಶಿಸಿ ಶೋಧ ನಡೆಸಬಹುದು ಅಥವಾ ಸಂವಹನ(ದೂರವಾಣಿ ಕರೆ ಇತ್ಯಾದಿ)ಗಳನ್ನು ತಡೆಯಲು ಅವಕಾಶವಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇಕ್ವೆಡಾರ್ನಲ್ಲಿ ಜನವರಿಯಲ್ಲಿ ಸಶಸ್ತ್ರಧಾರಿಗಳ ತಂಡವೊಂದು ನೇರ ಪ್ರಸಾರ ಕಾರ್ಯಕ್ರಮದ ಸಂದರ್ಭ ಟಿವಿ ಸ್ಟೇಷನ್ಗೆ ನುಗ್ಗಿ ಅಲ್ಲಿನ ಸಿಬ್ಬಂದಿಗಳನ್ನು ಬೆದರಿಸಿತ್ತು. ಆ ಬಳಿಕ ಮತ್ತೊಂದು ಗುಂಪು ಪ್ರಧಾನ ಜೈಲಿನ ಮೇಲೆ ದಾಳಿ ನಡೆಸಿ ಭದ್ರತಾ ಸಿಬ್ಬಂದಿಗಳನ್ನು ಒತ್ತೆಸೆರೆಯಲ್ಲಿರಿಸಿ ಹಲವು ಕುಖ್ಯಾತ ಕ್ರಿಮಿನಲ್ಗಳನ್ನು ಬಿಡಿಸಿಕೊಂಡು ಪರಾರಿಯಾಗಿತ್ತು. ಕೊಲಂಬಿಯಾ ಮತ್ತು ಪೆರು ದೇಶಗಳಿಂದ ಮಾದಕ ವಸ್ತುಗಳನ್ನು ಇಕ್ವೆಡಾರ್ ಮೂಲಕ ರವಾನಿಸುವ ಕ್ರಿಮಿನಲ್ ಗ್ಯಾಂಗ್ಗಳಿಂದ ದೇಶದಲ್ಲಿ ಕಾನೂನು ಸುವ್ಯವಸ್ಥೆಗೆ ತೊಡಕಾಗುತ್ತಿದೆ ಎಂದು ಸರಕಾರ ಹೇಳಿದೆ. ನಿರಂತರ ಹತ್ಯೆ, ಅಪಹರಣ ಹಾಗೂ ಇತರ ಅಪರಾಧಗಳನ್ನು ನಿಯಂತ್ರಿಸಲು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು ಎಂದು ಅಧ್ಯಕ್ಷರ ಕಚೇರಿಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.