ಕತರ್ ಮಧ್ಯಸ್ಥಿಕೆಯಲ್ಲಿ ಒಪ್ಪಂದ: ರಫಾ ಗಡಿಯನ್ನು ತೆರೆದಿಟ್ಟ ಈಜಿಪ್ಟ್
ವಿದೇಶಿ ಪಾಸ್ಪೋರ್ಟ್ದಾರರು, ಗಾಯಾಳುಗಳ ಮೊದಲ ತಂಡ ಈಜಿಪ್ಟ್ಗೆ ಆಗಮನ
Photo- PTI
ಕೈರೋ: ವಿದೇಶಿ ಪಾಸ್ಪೋರ್ಟ್ ಹೊಂದಿರುವವರ ಪ್ರಪ್ರಥಮ ತಂಡವೊಂದು ಯುದ್ಧಪೀಡಿತ ಗಾಝಾ ಪಟ್ಟಿಯಿಂದ ಈಜಿಪ್ಟ್ಗೆ ಬುಧವಾರ ನಿರ್ಗಮಿಸಿದೆ. ಕತರ್ ಮಧ್ಯಸ್ಥಿಕೆಯಲ್ಲಿ ಈಜಿಪ್ಟ್, ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆದ ಒಪ್ಪಂದದಂತೆ ಈ ತೆರವು ಕಾರ್ಯಾಚರಣೆ ನಡೆದಿದೆ.
ಈ ಒಪ್ಪಂದದ ಅನ್ವಯ ಈಜಿಪ್ಟ್ ಹಾಗೂ ಗಾಝಾ ಪಟ್ಟಿಯ ನಡುವೆ ಇರುವ ರಫಾ ಗಡಿದಾಟು ಕೇಂದ್ರದ ಮೂಲಕ ವಿದೇಶಿ ಪಾಸ್ಪೋರ್ಟ್ದಾರರು ಹಾಗೂ ಗಂಭೀರವಾಗಿ ಗಾಯಗೊಂಡ ಜನರು ಈಜಿಪ್ಟ್ಗೆ ನಿರ್ಗಮಿಸಲು ಅವಕಾಶ ಮಾಡಿಕೊಡಲಾಗಿದೆ.ಆದರೆ ಸ್ಥಳಾಂತರ ಕಾರ್ಯಾಚರಣೆಗಾಗಿ ರಫಾ ಗಡಿಕೇಂದ್ರವನ್ನು ಎಷ್ಟು ಸಮಯದವರೆಗೆ ತೆರೆದಿಡಲಾಗುವುದು ಎಂಬುದಕ್ಕೆ ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲವೆಂದು ಹೇಳಲಾಗಿದೆ.
ಯುದ್ಧಪೀಡಿತ ಗಾಝಾದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಆ್ಯಂಬುಲೆನ್ಸ್ಗಳು ಸಾಲುಸಾಲಾಗಿ ಈಜಿಪ್ಟ್ಗೆ ಕರೆತರುತ್ತಿರುವ ದೃಶ್ಯಗಳನ್ನು ಈಜಿಪ್ಟ್ನ ಕೆಲವು ಟಿವಿ ವಾಹಿನಿಗಳು ವರದಿ ಪ್ರಸಾರ ಮಾಡಿವೆ.
ಬುಧವಾರದಂದು ನೂರಾರು ವಿದೇಶಿಯರು ಹಾಗೂ ಗಾಯಾಳು ಗಾಝಾ ನಿವಾಸಿಗಳು ರಫಾ ಕೇಂದ್ರವನ್ನು ದಾಟುವುದಕ್ಕಾಗಿಯೇ ಈಜಿಪ್ಟ್ ಗಡಿಯಲ್ಲಿ ಜಮಾಯಿಸಿದ್ದರು. ಆ್ಯಂಬುಲೆನ್ಸ್ಗಳು ಹಾಗೂ ಗಾಲಿ ಕುರ್ಚಿಗಳಲ್ಲಿ ಕುಳಿತಿರುವ ಹಲವಾರು ಗಾಯಾಳುಗಳ ದೀರ್ಘ ಸರತಿಸಾಲುಗಳು ರಫಾ ಗಡಿಯಲ್ಲಿ ಕಂಡುಬರುತ್ತಿರುವುದಾಗಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ.