SBI ಸಲ್ಲಿಸಿದ ಚುನಾವಣಾ ಬಾಂಡ್ ಗಳ ಮಾಹಿತಿಯನ್ನು ಒಂದು ದಿನ ಮುಂಚಿತವಾಗಿಯೇ ಪ್ರಕಟಿಸಿದ ಚುನಾವಣಾ ಆಯೋಗ
ಚುನಾವಣಾ ಆಯೋಗ | Photo: PTI
ಹೊಸದಿಲ್ಲಿ : ರಾಜಕೀಯ ಪಕ್ಷಗಳಿಗೆ ದೇಣಿಗೆಗಳಲ್ಲಿ ಪಾರದರ್ಶಕತೆಯತ್ತ ಒಂದು ದೊಡ್ಡ ಹೆಜ್ಜೆಯಾಗಿ ಭಾರತೀಯ ಚುನಾವಣಾ ಆಯೋಗವು SBI ತನಗೆ ಸಲ್ಲಿಸಿರುವ ಚುನಾವಣಾ ಬಾಂಡ್ ಗಳ ವಿವರಗಳನ್ನು ಸರ್ವೋಚ್ಛ ನ್ಯಾಯಾಲಯವು ವಿಧಿಸಿದ್ದ ಗಡುವಿಗೆ ಒಂದು ದಿನ ಮೊದಲೇ ಗುರುವಾರ ತನ್ನ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಿದೆ. SBI ಮಂಗಳವಾರ ಸಂಜೆ ಈಗ ರದ್ದುಗೊಂಡಿರುವ ಚುನಾವಣಾ ಬಾಂಡ್ ಗಳನ್ನು ಖರೀದಿಸಿದ್ದ ಸಂಸ್ಥೆಗಳು ಮತ್ತು ಅವುಗಳನ್ನು ನಗದೀಕರಿಸಿದ್ದ ರಾಜಕೀಯ ಪಕ್ಷಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿತ್ತು. ಸರ್ವೋಚ್ಛ ನ್ಯಾಯಾಲಯವು ಚುನಾವಣಾ ಆಯೋಗಕ್ಕೆ ಈ ವಿವರಗಳನ್ನು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಲು ಮಾ.15ರ ಸಂಜೆ ಐದು ಗಂಟೆಯವರೆಗೆ ಗಡುವನ್ನು ವಿಧಿಸಿತ್ತು.
ಫೆ.15ರಂದು ಅನಾಮಧೇಯ ರಾಜಕೀಯ ದೇಣಿಗೆಗಳಿಗೆ ಅವಕಾಶ ಕಲ್ಪಿಸಿದ್ದ ಚುನಾವಣಾ ಬಾಂಡ್ ಯೋಜನೆಯನ್ನು ಅಸಾಂವಿಧಾನಿಕ ಎಂದು ಬಣ್ಣಿಸಿ ಅದನ್ನು ರದ್ದುಗೊಳಿಸಿದ್ದ ಸರ್ವೋಚ್ಛ ನ್ಯಾಯಾಲಯವು ದಾನಿಗಳ ಹೆಸರುಗಳು, ಅವರು ದೇಣಿಗೆ ನೀಡಿದ್ದ ಮೊತ್ತ ಮತ್ತು ಸ್ವೀಕರಿಸಿದ್ದ ಪಕ್ಷಗಳ ಹೆಸರುಗಳನ್ನು ಬಹಿರಂಗಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು.
ವಿವರಗಳನ್ನು ಬಹಿರಂಗಗೊಳಿಸಲು ಜೂ.30ರವರೆಗೆ ಸಮಯಾವಕಾಶ ನೀಡುವಂತೆ SBI ಸಲ್ಲಿಸಿದ್ದ ಕೋರಿಕೆಯನ್ನು ತಿರಸ್ಕರಿಸಿದ್ದ ಸರ್ವೋಚ್ಛ ನ್ಯಾಯಾಲಯವು ಮಂಗಳವಾರ ಕೆಲಸದ ಅವಧಿಯ ಅಂತ್ಯದೊಳಗೆ ಎಲ್ಲ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಆದೇಶಿಸಿತ್ತು.
ದತ್ತಾಂಶಗಳು 2019, ಎಪ್ರಿಲ್ 12ರಿಂದ ಒಂದು ಲಕ್ಷ ರೂ.,10 ಲಕ್ಷ ರೂ ಮತ್ತು ಒಂದು ಕೋಟಿ ರೂ.ಗಳ ಮೂರು ಮುಖಬೆಲೆಗಳ ಬಾಂಡ್ ಗಳ ಖರೀದಿಗೆ ಸಂಬಂಧಿಸಿವೆ ಮತ್ತು ಕಂಪನಿಗಳು ಹಾಗೂ ವ್ಯಕ್ತಿಗಳು ಮಾಡಿರುವ ಚುನಾವಣಾ ಬಾಂಡ್ ಗಳ ಖರೀದಿಗಳನ್ನು ಬಹಿರಂಗಗೊಳಿಸಿವೆ.
ಚುನಾವಣಾ ಆಯೋಗದ ವೆಬ್ ಸೈಟ್ ಎರಡು ಪಟ್ಟಿಗಳನ್ನು ಒಳಗೊಂಡಿದೆ. 337 ಪುಟಗಳ ಮೊದಲ ಪಟ್ಟಿಯು ಮುಖಬೆಲೆ ಮತ್ತು ದಿನಾಂಕಗಳೊಂದಿಗೆ ಚುನಾವಣಾ ಬಾಂಡ್ ಗಳನ್ನು ಖರೀದಿಸಿರುವ ಕಂಪನಿಗಳನ್ನು ಒಳಗೊಂಡಿದೆ. 426 ಪುಟಗಳ ಎರಡನೇ ಪಟ್ಟಿಯು ರಾಜಕೀಯ ಪಕ್ಷಗಳ ಹೆಸರುಗಳು, ಬಾಂಡ್ ಗಳ ಮುಖಬೆಲೆ ಮತ್ತು ಅವುಗಳನ್ನು ನಗದೀಕರಿಸಿದ ದಿನಾಂಕಗಳನ್ನು ಒಳಗೊಂಡಿದೆ. ಬಾಂಡ್ ನಂಬರ್ ಗಳನ್ನು ಒದಗಿಸಲಾಗಿಲ್ಲ. ಆದಾಗ್ಯೂ ಪಟ್ಟಿಗಳನ್ನು ಪರಸ್ಪರ ಸಂಬಂಧಿಸಲು ಮತ್ತು ಯಾವ ಕಂಪನಿಯು ಯಾವ ರಾಜಕೀಯ ಪಕ್ಷಕ್ಕೆ ದೇಣಿಗೆಯನ್ನು ನೀಡಿದೆ ಎಂದು ಕಂಡುಕೊಳ್ಳುವ ಅವಕಾಶವಿಲ್ಲ.
ಯೋಜನೆಯ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಕಂಪನಿಗಳಲ್ಲಿ ಗ್ರಾಸಿಮ್ ಇಂಡಸ್ಟ್ರೀಸ್,ಮೇಘಾ ಇಂಜಿನಿಯರಿಂಗ್, ಟೊರೆಂಟ್ ಪವರ್, ಭಾರ್ತಿ ಏರ್ಟೆಲ್, ಡಿಎಲ್ಎಫ್ ಕಮರ್ಷಿಯಲ್ ಡೆವಲಪರ್ಸ್, ವೇದಾಂತ ಲಿ., ಅಪೋಲೊ ಟೈರ್ಸ್, ಲಕ್ಷ್ಮಿ ಮಿತ್ತಲ್, ಪಿವಿಆರ್, ಸನ್ ಫಾರ್ಮಾ ಸೇರಿವೆ.
ಆದರೆ ಎರಡು ಬೃಹತ್ ಉದ್ಯಮ ಸಮೂಹಗಳಾಗಿರುವ ಅದಾನಿ ಗ್ರೂಪ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ಗಳ ಉಲ್ಲೇಖವಿಲ್ಲ.
ಈ ಬಾಂಡ್ ಗಳ ಮೂಲಕ ದೇಣಿಗೆಗಳನ್ನು ಸ್ವೀಕರಿಸಿರುವ ರಾಜಕೀಯ ಪಕ್ಷಗಳಲ್ಲಿ ಬಿಜೆಪಿ,ಕಾಂಗ್ರೆಸ್,ಎಐಎಡಿಎಂಕೆ ,ಬಿಆರ್ಎಸ್,ಶಿವಸೇನೆ,ಟಿಡಿಪಿ,ವೈಎಸ್ಆರ್ ಕಾಂಗ್ರೆಸ್, ಡಿಎಂಕೆ.ಜೆಡಿಎಸ್,ಎನ್ಸಿಪಿ,ಟಿಎಂಸಿ,ಜೆಡಿಯು,ಆರ್ಜೆಡಿ, ಆಪ್ ಮತ್ತು ಎಸ್ಪಿ ಸೇರಿವೆ.