ಟ್ರಂಪ್ ವಿರುದ್ಧದ ಚುನಾವಣಾ ಅಪರಾಧ ಪ್ರಕರಣ ವಜಾ
ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ವಿರುದ್ಧ, 2020ರ ಚುನಾವಣಾ ಸೋಲಿನ ಹಿನ್ನೆಲೆಯಲ್ಲಿ ಚುನಾವಣೆ ಬಳಿಕದ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣವನ್ನು ಅಮೆರಿಕ ನ್ಯಾಯಾಲಯ ವಜಾಗೊಳಿಸಿದೆ.
ಟ್ರಂಪ್ ವಿರುದ್ಧ ಈ ಸಂಬಂಧ ಎರಡು ಪ್ರಕರಣಗಳ ತನಿಖೆ ಕೈಬಿಡಬೇಕು ಎಂದು ಕೋರಿ ಅಭಿಯೋಜಕರು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. ಹಾಲಿ ಅಧ್ಯಕ್ಷರ ವಿರುದ್ಧ ತನಿಖೆ ನಡೆಸುವುದನ್ನು ನಿಷೇಧಿಸುವುದು ನ್ಯಾಯಾಂಗ ಇಲಾಖೆಯ ನೀತಿಯಾಗಿರುವುದರಿಂದ ಪ್ರಕರಣ ಕೈಬಿಡುವಂತೆ ಕೋರಲಾಗಿತ್ತು.
2020ರ ಚುನಾವಣಾ ಸೋಲಿನ ಹಿನ್ನೆಲೆಯಲ್ಲಿ 2021ರ ಜನವರಿ 6ರಂದು ಟ್ರಂಪ್ ಬೆಂಬಲಿಗರು ಅಮೆರಿಕದ ಸಂಸತ್ ಭವನದ ಮೇಲೆ ನಡೆಸಿದ ದಾಳಿಗೆ ಟ್ರಂಪ್ ಕುಮ್ಮಕ್ಕು ನೀಡಿದ್ದರು ಎಂಬ ಆರೋಪದಲ್ಲಿ ಟ್ರಂಪ್ ಅವರನ್ನು ಹೊಣೆಗಾರರನ್ನಾಗಿ ಮಾಡುವ ಫೆಡರಲ್ ವ್ಯವಸ್ಥೆಯ ಪ್ರಯತ್ನಗಳು ಅಮೆರಿಕದ ಜಿಲ್ಲಾ ನ್ಯಾಯಾಧೀಶರರಾದ ತಾನ್ಯಾ ಚುಟ್ಕನ್ ನೀಡಿದ ಈ ತೀರ್ಪಿನ ಮೂಲಕ ವಿಫಲವಾಗಿದೆ.
ಎರಡೂ ಪ್ರಕರಣಗಳನ್ನು ನೋಡಿಕೊಳ್ಳುತ್ತಿದ್ದ ವಿಶೇಷ ಅಭಿಯೋಜಕ ಜ್ಯಾಕ್ ಸ್ಮಿತ್ ಅವರು, ಚುನಾವಣೆ ಸಂಬಂಧಿತ ಪ್ರಕರಣಗಳನ್ನು ವಜಾಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ಜತೆಗೆ 2021ರಲ್ಲಿ ಅಧಿಕಾರದಿಂದ ಕೆಳಗಿಳಿಯುವ ಸಂದರ್ಭದಲ್ಲಿ ವರ್ಗೀಕೃತ ದಾಖಲೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ ಎಂಬ ಪ್ರಕರಣ ವಜಾಗೊಳಿಸುವಂತೆಯೂ ಕೋರಿದ್ದರು.
ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಟ್ರಂಪ್ ಅವರಿಗೆ ಇದು ಬಹುದೊಡ್ಡ ಗೆಲುವು ಎಂದು ವಿಶ್ಲೇಷಿಸಲಾಗುತ್ತಿದೆ. ನವೆಂಬರ್ 5ರಂದು ಚುನಾಯಿತರಾಗಿದ್ದ ಅವರು ಜನವರಿ 20ರಂದು ಅಧಿಕಾರ ವಹಿಸಿಕೊಳ್ಳುವರು.
ನ್ಯಾಯಾಂಗ ಇಲಾಖೆಯ ನೀತಿ 1970ರ ದಶಕಕ್ಕೆ ಸಂಬಂಧಿಸಿದ್ದು ಎಂದು ಅಭಿಯೋಜಕರು ವಾದ ಮಂಡಿಸಿದ್ದರು. ಹಾಲಿ ಅಧ್ಯಕ್ಷರ ವಿರುದ್ಧ ತನಿಖೆ ನಡೆಸುವುದು ಅಮೆರಿಕದ ಸಂವಿಧಾನಕ್ಕೆ ವಿರುದ್ಧವಾದದ್ದು. ಇದು ದೇಶದ ಆಡಳಿತದ ಚುಕ್ಕಾಣಿ ಹಿಡಿದವರ ಕಾರ್ಯನಿರ್ವಹಣೆಗೆ ತಡೆ ಒಡ್ಡುವಂಥದ್ದು ಎನ್ನುವುದು ನ್ಯಾಯಾಂಗ ನೀತಿ ಎಂದು ವಾದಿಸಿದ್ದರು.