'ಇದು ಆತ್ಮಹತ್ಯೆಯಂತೆ ಕಾಣುತ್ತಿಲ್ಲ': ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮಾಜಿ ಉದ್ಯೋಗಿ ಸುಚಿರ್ ಬಾಲಾಜಿ ಸಾವಿನ ಕುರಿತು ಎಲಾನ್ ಮಸ್ಕ್ ಪ್ರತಿಕ್ರಿಯೆ
Photo | X/@suchirbalaji
ಸ್ಯಾನ್ ಫ್ರಾನ್ಸಿಸ್ಕೋ: ಕೃತಕ ಬುದ್ಧಿಮತ್ತೆ ಸಂಸ್ಥೆಯಾದ ಓಪನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮಾಜಿ ಉದ್ಯೋಗಿ ವಿಸ್ಲ್ ಬ್ಲೋವರ್ ಸುಚಿರ್ ಬಾಲಾಜಿ ಅವರ ಸಾವಿನ ಸುತ್ತಲಿನ ವಿವಾದವು ಹೊಸ ತಿರುವು ಪಡೆದುಕೊಂಡಿದೆ. ಬಾಲಾಜಿ ಅವರ ತಾಯಿ ಕೊಲೆ ಆರೋಪವನ್ನು ಮಾಡಿದ್ದು, ಈ ಕುರಿತು ತನಿಖೆಗೆ ಒತ್ತಾಯಿಸಿದ್ದಾರೆ.
ಬಾಲಾಜಿ ಅವರ ತಾಯಿ ಪೂರ್ಣಿಮಾ ರಾಮರಾವ್ ಅವರು ಮಗನ ಸಾವನ್ನು ಕೊಲೆ ಎಂದು ಕರೆದಿದ್ದಾರೆ, ಆದರೆ ಅಧಿಕಾರಿಗಳು ಮಾತ್ರ ಆತ್ಮಹತ್ಯೆ ಎಂದು ಘೋಷಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪೂರ್ಣಿಮಾ ರಾಮರಾವ್, ನಾವು ಈ ಕುರಿತು ತನಿಖೆಗೆ ಖಾಸಗಿ ತನಿಖಾಧಿಕಾರಿಯನ್ನು ನೇಮಿಸಿದ್ದೇವೆ ಮತ್ತು ಸಾವಿನ ಕಾರಣವನ್ನು ಪತ್ತೆ ಹಚ್ಚಲು ಎರಡನೇ ಬಾರಿಗೆ ಶವಪರೀಕ್ಷೆಯನ್ನು ಮಾಡಿದ್ದೇವೆ. ಖಾಸಗಿ ಶವಪರೀಕ್ಷೆಯು ಪೊಲೀಸರು ಹೇಳಿದ ಕಾರಣವನ್ನು ದೃಢೀಕರಿಸುವುದಿಲ್ಲ. ಸುಚಿರ್ ಇದ್ದ ಅಪಾರ್ಟ್ಮೆಂಟ್ ನ ಬಾತ್ ರೂಂನಲ್ಲಿ ರಕ್ತದ ಕಲೆಗಳು ಇದ್ದವು. ಯಾರೋ ಅವನನ್ನು ಸ್ನಾನಗೃಹದಲ್ಲಿ ಹೊಡೆದಂತೆ ತೋರುತ್ತಿದೆ ಎಂದು ಹೇಳಿದ್ದಾರೆ.
ಪೂರ್ಣಿಮಾ ರಾಮರಾವ್ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಎಲಾನ್ ಮಸ್ಕ್, ಇದು ಆತ್ಮಹತ್ಯೆಯಂತೆ ತೋರುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಕೃತಕ ಬುದ್ಧಿಮತ್ತೆ ಸಂಸ್ಥೆಯಾದ ಓಪನ್ ಎಐ ಕಾರ್ಯಚಟುವಟಿಕೆಗಳು ಕಾನೂನನ್ನು ಉಲ್ಲಂಘಿಸುತ್ತಿವೆ ಎಂದು ಆರೋಪಿಸಿದ್ದ, ಸಂಸ್ಥೆಯ ಮಾಜಿ ಉದ್ಯೋಗಿ ಭಾರತೀಯ ಮೂಲದ ಸುಚಿರ್ ಬಾಲಾಜಿ ಅವರ ಮೃತದೇಹವು ಸ್ಯಾನ್ ಫ್ರಾನ್ಸಿಸ್ಕೋದ ಅವರ ಅಪಾರ್ಟ್ಮೆಂಟ್ ನಲ್ಲಿ ನವೆಂಬರ್ 26ರಂದು ಪತ್ತೆಯಾಗಿತ್ತು.