ಗಾಝಾದಲ್ಲಿ ತುರ್ತು ಮಾನವೀಯ ವಿರಾಮ: ವಿಶ್ವಸಂಸ್ಥೆ ಆಗ್ರಹ
ಭದ್ರತಾ ಮಂಡಳಿಯಲ್ಲಿ ನಿರ್ಣಯ ಮಂಡನೆ
ಸಾಂದರ್ಭಿಕ ಚಿತ್ರ | Photo: twitter
ವಿಶ್ವಸಂಸ್ಥೆ: ಗಾಝಾದಲ್ಲಿ ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭದ ನಂತರ ಬುಧವಾರ ಮೊದಲ ನಿರ್ಣಯ ಅಂಗೀಕರಿಸಿದ ವಿಶ್ವಸಂಸ್ಥೆ ಭದ್ರತಾ ಮಂಡಳಿ `ಉಲ್ಬಣಗೊಳ್ಳುತ್ತಿರುವ ಬಿಕ್ಕಟ್ಟನ್ನು ಪರಿಹರಿಸಲು ಗಾಝಾದಲ್ಲಿ ತುರ್ತು ಮತ್ತು ವಿಸ್ತೃತ ಮಾನವೀಯ ವಿರಾಮಗಳಿಗೆ' ಕರೆ ನೀಡಿದೆ.
ಯುದ್ಧವಿರಾಮದ ಉಲ್ಲೇಖ ಹಾಗೂ ಹಮಾಸ್ ದಾಳಿಯನ್ನು ಖಂಡಿಸುವ ವಿಷಯದಲ್ಲಿ ಭಿನ್ನಾಭಿಪ್ರಾಯ ಮೂಡಿಬಂದ ಹಿನ್ನೆಲೆಯಲ್ಲಿ ಕಳೆದ ತಿಂಗಳು ವಿಶ್ವಸಂಸ್ಥೆ ಭದ್ರತಾ ಮಂಡಳಿಯ 4 ಸಭೆಗಳಲ್ಲೂ ನಿರ್ಣಯ ಅಂಗೀಕರಿಸುವ ಪ್ರಯತ್ನ ವಿಫಲಗೊಂಡಿತ್ತು.
ಬುಧವಾರ ನಡೆದ 15 ಸದಸ್ಯರ ಭದ್ರತಾ ಮಂಡಳಿ ಸಭೆಯು ಗಾಝಾದಲ್ಲಿ ಮಾನವೀಯ ವಿರಾಮಕ್ಕೆ ಕರೆ ನೀಡುವ ನಿರ್ಣಯವನ್ನು 12-0 ಮತಗಳಿಂದ ಅಂಗೀಕರಿಸಿದ್ದು ಅಮೆರಿಕ, ಬ್ರಿಟನ್ ಮತ್ತು ರಶ್ಯ ಮತದಾನದಿಂದ ದೂರ ಉಳಿದವು. ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯನ್ನು ಖಂಡಿಸುವ ಉಲ್ಲೇಖ ನಿರ್ಣಯದಲ್ಲಿ ಇಲ್ಲ ಎಂಬ ಕಾರಣಕ್ಕೆ ಅಮೆರಿಕ ಮತ್ತು ಬ್ರಿಟನ್ ಮತದಾನದಿಂದ ದೂರ ಉಳಿದರೆ, ಯುದ್ಧವಿರಾಮದ ಉಲ್ಲೇಖವಿಲ್ಲ ಎಂಬ ಕಾರಣಕ್ಕೆ ರಶ್ಯ ದೂರ ಉಳಿಯಿತು.
ಅಂತಿಮ ನಿರ್ಣಯದಲ್ಲಿ ಮಾನವೀಯ ವಿರಾಮಕ್ಕೆ `ಆಗ್ರಹ' ಎಂಬ ಪದದ ಬದಲು `ಕರೆ' ಎಂಬ ಪದ ಬಳಸಲಾಗಿದೆ ಮತ್ತು ಹಮಾಸ್ ಹಾಗೂ ಇತರ ಗುಂಪುಗಳ ವಶದಲ್ಲಿರುವ ಒತ್ತೆಯಾಳುಗಳನ್ನು ತಕ್ಷಣ ಮತ್ತು ಬೇಷರತ್ತಾಗಿ ಬಿಡುಗಡೆಗೊಳಿಸಲು ಒತ್ತಾಯಿಸಲಾಗಿದೆ.
ಮಾಲ್ಟ ದೇಶ ಮಂಡಿಸಿದ ನಿರ್ಣಯದಲ್ಲಿ ಕೆಲವು ತಿದ್ದುಪಡಿ ಮಾಡಬೇಕೆಂದು ರಶ್ಯ ಆಗ್ರಹಿಸಿದಾಗ ತಿದ್ದುಪಡಿ ಬೇಕೇ ಎಂಬ ವಿಷಯವನ್ನು ಮತಕ್ಕೆ ಹಾಕಲಾಯಿತು. ತಿದ್ದುಪಡಿಯ ಪರವಾಗಿ 5 ದೇಶಗಳು ಮತ ಹಾಕಿದ್ದರೆ ಅಮೆರಿಕ ವಿರೋಧಿಸಿತು ಮತ್ತು 9 ದೇಶಗಳು ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ. ಕನಿಷ್ಟ 9 ಮತಗಳು ಅಗತ್ಯವಿದ್ದರಿಂದ ರಶ್ಯದ ಆಗ್ರಹ ತಿರಸ್ಕೃತಗೊಂಡಿತು.
ಅರಬ್ ಸದಸ್ಯರು ನಿರ್ಣಯವನ್ನು ಬೆಂಬಲಿಸಿದ್ದಾರೆ. ಭದ್ರತಾ ಮಂಡಳಿ ಅಸಡ್ಡೆಯಿಂದ ವರ್ತಿಸುತ್ತದೆ ಎಂಬ ಪ್ರಪಂಚದ ಗ್ರಹಿಕೆಯನ್ನು ಈ ನಿರ್ಣಯವು ಬದಲಾಯಿಸುತ್ತದೆ. ಇದು ಮೊದಲ ಮತ್ತು ಪ್ರಮುಖ ಹೆಜ್ಜೆಯಾಗಿದ್ದು ಇದು ಶಾಶ್ವತ ಕದನ ವಿರಾಮದತ್ತ ಮುಂದುವರಿಯಬೇಕಿದೆ ಎಂದು ಯುಎಇ ರಾಯಭಾರಿ ಲಾನಾ ನುಸೈಬ ಹೇಳಿದ್ದಾರೆ.
ಭದ್ರತಾ ಮಂಡಳಿ ಈಗಲೇ ಕದನ ವಿರಾಮಕ್ಕೆ ಕರೆ ನೀಡಬೇಕು ಮತ್ತು ಯಾವುದೇ ಬಿಕ್ಕಟ್ಟಿಗೆ ಮಿಲಿಟರಿ ಕಾರ್ಯಾಚರಣೆ ಪರಿಹಾರವಲ್ಲ ಎಂಬುದನ್ನು ಸಾರಿ ಹೇಳಬೇಕು ' ಎಂದು ವಿಶ್ವಸಂಸ್ಥೆಯಲ್ಲಿ ಫೆಲೆಸ್ತೀನ್ನ ಖಾಯಂ ವೀಕ್ಷಕ ರಿಯಾದ್ ಮನ್ಸೂರ್ ಪ್ರತಿಕ್ರಿಯಿಸಿದ್ದಾರೆ.
ನಿರ್ಣಯ ವಾಸ್ತವಿಕತೆಯಿಂದ ದೂರವಿದ್ದು ಅರ್ಥಹೀನವಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಇಸ್ರೇಲ್ನ ರಾಯಭಾರಿ ಗಿಲಾಡ್ ಎರ್ಡನ್ ಹೇಳಿದ್ದಾರೆ. ಭದ್ರತಾ ಮಂಡಳಿ ಹಮಾಸ್ ಅನ್ನು ಖಂಡಿಸಲು ವಿಫಲವಾಗಿದೆ ಎಂದು ಟೀಕಿಸಿರುವ ಅವರು, ಗಾಝಾದಲ್ಲಿ ಹಮಾಸ್ ಉದ್ದೇಶಪೂರ್ವಕವಾಗಿ ಮಾನವೀಯ ಪರಿಸ್ಥಿತಿಯನ್ನು ಹದಗೆಡಿಸುತ್ತಿದೆ. ಇಸ್ರೇಲ್ನ ಮೇಲೆ ದೋಷಾರೋಪಣೆ ಮಾಡುವುದು ಅವರ ಉದ್ದೇಶವಾಗಿದೆ. ಆದರೆ ಇದು ಸಾಧ್ಯವಾಗದು. ಹಮಾಸ್ ನಾಶಗೊಳ್ಳುವವರೆಗೆ ಇಸ್ರೇಲ್ ವಿರಮಿಸುವುದಿಲ್ಲ' ಎಂದು ಹೇಳಿದರು.