ಎಸ್ಸಿಇಝೆಡ್ ನಲ್ಲಿ ಭಾರತದ ಹೂಡಿಕೆಗೆ ಉತ್ತೇಜನ: ಈಜಿಪ್ಟ್ ಘೋಷಣೆ
Photo: twitter\ NDTV.com
ಕೈರೊ: ಸುಯೆಝ್ ಕಾಲುವೆ ಆರ್ಥಿಕ ವಲಯ(SCEZ)ದಲ್ಲಿ ಭಾರತದ ಹೂಡಿಕೆಗೆ ಉತ್ತೇಜನ ನೀಡುವುದಾಗಿ ಈಜಿಪ್ಟ್ ಶನಿವಾರ ಘೋಷಿಸಿದ್ದು ಈ ವಿಷಯವು ಭಾರತದ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಭೇಟಿ ನೀಡಿರುವ ಸಂದರ್ಭದ ಚರ್ಚೆಯಲ್ಲಿನ ಕಾರ್ಯಸೂಚಿಯಾಗಿದೆ ಎಂದು ಹೇಳಿದೆ.
ಈಜಿಪ್ಟ್ ತನ್ನ ಸೂಯೆಝ್ ಕಾಲುವೆ ಪ್ರದೇಶವನ್ನು ಭಾರತದ ವ್ಯವಹಾರಗಳಿಗೆ ಪ್ರಮುಖ ಹೂಡಿಕೆಯ ಅವಕಾಶವಾಗಿರಿಸಿದೆ. ಮೆಡಿಟರೇನಿಯನ್ ಸಮುದ್ರವನ್ನು ಕೆಂಪು ಸಮುದ್ರ ಮತ್ತು ಹಿಂದೂ ಮಹಾಸಾಗರದೊಂದಿಗೆ ಸಂಪರ್ಕಿಸುವ ವಿಶ್ವದ ಪ್ರಮುಖ ಕಾರ್ಯತಂತ್ರದ ಜಲಸಂಧಿಯಾಗಿರುವ ಸೂಯೆಝ್ ಕಾಲುವೆ ಈಜಿಪ್ಟ್ ನ ನಿಯಂತ್ರಣದಲ್ಲಿದೆ. ಜಾಗತಿಕ ಸಮುದ್ರ ವ್ಯಾಪಾರದ 20%ದಷ್ಟು ಈ ಜಲಮಾರ್ಗದ ಮೂಲಕ ನಡೆಯುತ್ತದೆ.
ಈ ಕಾಲುವೆ ಮೂಲಕ ಪ್ರತೀದಿನ ರವಾನೆಯಾಗುವ 4.8 ದಶಲಕ್ಷ ಬ್ಯಾರೆಲ್ ಗಳಷ್ಟು ಕಚ್ಛಾತೈಲದಲ್ಲಿ 5 ಲಕ್ಷ ಬ್ಯಾರೆಲ್ ಗಳಷ್ಟು ಕಚ್ಛಾತೈಲ ಭಾರತವನ್ನು ತಲುಪುತ್ತದೆ. ಸುಯೆಝ್ ಕಾಲುವೆ ವಲಯವನ್ನು ಅಭಿವೃದ್ಧಿಪಡಿಸುವ ಎಸ್ಸಿಝೋನ್ ನೀಲನಕ್ಷೆಯಲ್ಲಿ ಹಲವು ಕೈಗಾರಿಕೆಗಳು ಹಾಗೂ ಶಿಪಿಂಗ್ ವಲಯವನ್ನು ಸ್ಥಾಪಿಸುವ ಯೋಜನೆಯಿದೆ. ಬೃಹತ್ ಕೈಗಾರಿಕಾ ವಲಯ, ಲಾಜಿಸ್ಟಿಕ್ ವಲಯಗಳ ಮೂಲಕ ಕೆಂಪು ಮತ್ತು ಮೆಡಿಟರೇನಿಯನ್ ಸಮುದ್ರಗಳನ್ನು ಜೋಡಿಸುವ ಮೂಲಕ ದೇಶವನ್ನು ಜಾಗತಿಕ ಲಾಜಿಸ್ಟಿಕ್ ಮತ್ತು ವಾಣಿಜ್ಯ ಕೇಂದ್ರವಾಗಿ ಪರಿವರ್ತಿಸುವ ಯೋಜನೆ ಇದಾಗಿದೆ. ಇದು 460 ಕಿ.ಮೀ ವ್ಯಾಪ್ತಿಯ ಸ್ವತಂತ್ರ, ಅಭಿವೃದ್ಧಿ ಹೊಂದುತ್ತಿರುವ ಅಂತರಾಷ್ಟ್ರೀಯ ವಾಣಿಜ್ಯ ಕೇಂದ್ರವಾಗಿದ್ದು ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಯುರೋಪ್ ಗಳ ನಡುವೆ ಆಯಕಟ್ಟಿನ 6 ಕಡಲ ಬಂದರುಗಳನ್ನು ಹೊಂದಿದೆ.
ಭಾರತ-ಈಜಿಪ್ಟ್ ಆರ್ಥಿಕ ಹೂಡಿಕೆಯ ಬಗ್ಗೆ , ವಿಶೇಷವಾಗಿ ನವೀಕರಿಸಬಹುದಾದ ಶಕ್ತಿ, ಹಸಿರು ಜಲಜನಕ ಮತ್ತು ಮೂಲಸೌಕರ್ಯಗಳಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ಹೂಡಿಕೆಯ ಅವಕಾಶಗಳ ಬಗ್ಗೆ ಎಸ್ಸಿಝೋನ್ ನ ಅಧ್ಯಕ್ಷ ವಲೇದ್ ಗಮಾಲ್ ಎಲ್ಡೈನ್ ನೇತೃತ್ವದ ನಿಯೋಗವು ಇತ್ತೀಚೆಗೆ ಭಾರತದ ಜತೆ ಚರ್ಚೆ ನಡೆಸಿದೆ. ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತಾಹ್ ಎಲ್-ಸಿಸಿ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭ, ಸುಯೆಝ್ ಕಾಲುವೆ ವಲಯದಲ್ಲಿ ಭಾರತದ ಉದ್ಯಮಿಗಳು ಹೂಡಿಕೆ ಮಾಡುವುದಕ್ಕೆ ಎಲ್ಲಾ ರೀತಿಯ ಬೆಂಬಲ, ನೆರವು ಒದಗಿಸುವುದಾಗಿ ವಾಗ್ದಾನ ನೀಡಿದ್ದರು.
ಅಲ್ಲದೆ, ಈಜಿಪ್ಟ್ ನ ಸೊಖಾನಾದಲ್ಲಿ 2024ರಲ್ಲಿ ಹಸಿರು ಜಲಜನಕ ಯೋಜನೆ ಸ್ಥಾಪಿಸುವ ನಿಟ್ಟಿನಲ್ಲಿ ಎಸ್ಸಿಝೋನ್ ಭಾರತದ ಎಸಿಎಂಇ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಜತೆಗೆ ಭಾರತದ ಖಾಸಗಿ ಕ್ಷೇತ್ರದ ಹಲವು ಸಂಸ್ಥೆಗಳು ಈಗಾಗಲೇ ಈಜಿಪ್ಟ್ನಲ್ಲಿ ಪ್ರಮುಖ ಯೋಜನೆಗಳಲ್ಲಿ ಹೂಡಿಕೆ ಮಾಡಿವೆ. ವಿದ್ಯುತ್, ಸ್ಟೀಲ್, ರಾಸಾಯನಿಕ ಮತ್ತು ಕೃಷಿ ವಲಯದ ಭಾರತದ ಸಂಸ್ಥೆಗಳು ಈಜಿಪ್ಟ್ ನಲ್ಲಿ ಯೋಜನೆ ಸ್ಥಾಪಿಸಲು ಆಸಕ್ತಿ ವಹಿಸಿವೆ ಎಂದು ಎಸ್ಸಿಝೋನ್ ಅಧಿಕಾರಿಗಳು ಹೇಳಿದ್ದಾರೆ.
ಅರಬ್ ಜಗತ್ತು ಮತ್ತು ಯುರೋಪ್ ವಲಯದ ರಾಜಕೀಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಈಜಿಪ್ಟ್ ಜತೆ ಸಂಬಂಧ ಸುಧಾರಣೆಗೆ ಭಾರತ ಮುಂದಾಗಿರುವ ಸಂದರ್ಭದಲ್ಲೇ ಈಜಿಪ್ಟ್ನಿಂದ ಈ ಪ್ರಸ್ತಾವನೆ ಬಂದಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.