ಇಥಿಯೋಪಿಯಾ: ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ 157ಕ್ಕೆ ಏರಿಕೆ
PC : PTI
ಅಡಿಸ್ ಅಬಾಬ : ಇಥಿಯೋಪಿಯಾದಲ್ಲಿ ರವಿವಾರದಿಂದ ಮುಂದುವರಿದಿರುವ ಧಾರಾಕಾರ ಮಳೆ ಮತ್ತು ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 157ಕ್ಕೆ ಏರಿದೆ. ಕೆಸರು ಮಣ್ಣಿನ ರಾಶಿಯಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ಮೃತರಲ್ಲಿ ಮಕ್ಕಳು, ಗರ್ಭಿಣಿ ಮಹಿಳೆಯರು ಸೇರಿದ್ದಾರೆ. ದಕ್ಷಿಣ ಇಥಿಯೋಪಿಯಾದ ಕೆಂಚೊ ಷಚಾ ಗೋಝ್ದಿ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು ಹಲವೆಡೆ ಭೂಕುಸಿತ ಸಂಭವಿಸಿದೆ. ಗೊಫಾ ಪ್ರದೇಶದಲ್ಲಿ ಅಪಾರ ಹಾನಿ ಸಂಭವಿಸಿದೆ. ರವಿವಾರ ರಾತ್ರಿ ಸಂಭವಿಸಿದ ಭೂಕುಸಿತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗ ಸೋಮವಾರ ಮತ್ತೆ ಭೂಕುಸಿತ ಉಂಟಾಗಿದೆ. ಆಳವಾದ ಕಮರಿಗಳಲ್ಲಿ ರಾಶಿ ಬಿದ್ದಿರುವ ಕಲ್ಲು ಮಣ್ಣುಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆಗೆ ಮಳೆ ಅಡ್ಡಿಯಾಗುತ್ತಿದೆ. ಇದುವರೆಗೆ 157 ಮೃತದೇಹ ಪತ್ತೆಯಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ಇದುವರೆಗೆ ಕನಿಷ್ಟ 5 ಮಂದಿಯನ್ನು ರಕ್ಷಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿ ಡಗ್ಮಾವಿ ಅಯೆಲೆ ಹೇಳಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ತಂಡದ ಮೇಲೆಯೇ ಗುಡ್ಡವೊಂದು ಕುಸಿದು ಬಿದ್ದಿದ್ದು ಹಲವರು ನಾಪತ್ತೆಯಾಗಿದ್ದಾರೆ. ದುರಂತದಲ್ಲಿ ತಾಯಿ, ತಂದೆ, ಸಹೋದರ ಸೇರಿದಂತೆ ಇಡೀ ಕುಟುಂಬವನ್ನು ಕಳೆದುಕೊಂಡ ಕೆಲವು ಮಕ್ಕಳು ಅನಾಥವಾಗಿವೆ ಎಂದು ಗೊಫಾದ ಅಧಿಕಾರಿ ಮಾರ್ಕೋಸ್ ಮೆಲೆಸೆ ಹೇಳಿದ್ದಾರೆ.