ನಿರ್ಧಾರ ಮರುಪರಿಶೀಲಿಸಿ ಅಮೆರಿಕಕ್ಕೆ ಇಯು ಆಗ್ರಹ
ಜೋಸೆಫ್ ಬೊರೆಲ್ | Photo: NDTV
ಲಂಡನ್ : ಉಕ್ರೇನ್ ಗೆ ಹೆಚ್ಚುವರಿ ಆರ್ಥಿಕ ನೆರವು ಒದಗಿಸುವ ನಿರ್ಣಯವನ್ನು ಸ್ಟಾಪ್ ಗ್ಯಾಪ್ ಮಸೂದೆಯಿಂದ ಕೈಬಿಡುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಯುರೋಪಿಯನ್ ಯೂನಿಯನ್ನ ವಿದೇಶಾಂಗ ನೀತಿ ಮುಖ್ಯಸ್ಥ ಜೋಸೆಫ್ ಬೊರೆಲ್ ಅಮೆರಿಕವನ್ನು ಆಗ್ರಹಿಸಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಜತೆಗಿನ ಸಭೆಯ ಬಳಿಕ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಬೊರೆಲ್ ‘ಅಮೆರಿಕ ಸಂಸತ್ ನಲ್ಲಿ ಕೈಗೊಂಡ ಅಂತಿಮ ಕ್ಷಣದ ಒಪ್ಪಂದದಿಂದ ಯುರೋಪಿಯನ್ ಮುಖಂಡರಿಗೆ ಆಶ್ಚರ್ಯವಾಗಿದೆ. ಆದರೆ ಏನೇ ಆದರೂ ಯುರೋಪಿಯನ್ ಬಣದ 27 ಸದಸ್ಯ ದೇಶಗಳ ಬೆಂಬಲ ಉಕ್ರೇನ್ ಗೆ ಮುಂದುವರಿಯಲಿದೆ’ ಎಂದರು.
‘ಇದು ನಿರ್ಣಾಯಕ ನಿರ್ಧಾರವಲ್ಲ. ಉಕ್ರೇನ್ ಗೆ ಅಮೆರಿಕದ ನೆರವು ಮುಂದುವರಿಯಲಿದೆ ಎಂಬ ವಿಶ್ವಾಸವಿದೆ. ನಾವು ಅಸ್ತಿತ್ವದ ಅಪಾಯ ಎದುರಿಸುತ್ತಿದ್ದೇವೆ. ಉಕ್ರೇನಿಯನ್ನರು ತಮ್ಮ ಎಲ್ಲಾ ಧೈರ್ಯ ಮತ್ತು ಸಾಮರ್ಥ್ಯದೊಂದಿಗೆ ಹೋರಾಡುತ್ತಿದ್ದಾರೆ. ಅವರು ಯಶಸ್ವಿಯಾಗಬೇಕೆಂದು ನಾವು ಬಯಸುವುದಾದರೆ ಅವರಿಗೆ ಉತ್ತಮ ಶಸ್ತ್ರಾಸ್ತ್ರ ಮತ್ತು ತುರ್ತು ನೆರವನ್ನು ಒದಗಿಸಬೇಕಾಗಿದೆ’ ಎಂದವರು ಪ್ರತಿಪಾದಿಸಿದ್ದಾರೆ.