ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸುತ್ತಿರುವ ಹಮಾಸ್: ಯುರೋಪಿಯನ್ ಯೂನಿಯನ್ ಆರೋಪ
Representational Image | PC: PTI
ಬ್ರಸೆಲ್ಸ್: ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಹಮಾಸ್ ಆಸ್ಪತ್ರೆಗಳು ಹಾಗೂ ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸುತ್ತಿದೆ ಎಂದು ಯುರೋಪಿಯನ್ ಯೂನಿಯನ್(ಇಯು)ನ 27 ರಾಷ್ಟ್ರಗಳು ಜಂಟಿಯಾಗಿ ಖಂಡಿಸಿವೆ.
ಇದೇ ವೇಳೆ, ಹಮಾಸ್ ವಿರುದ್ಧದ ದಾಳಿಯಲ್ಲಿ ಮಾನವ ಸಾವುನೋವುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ತಪ್ಪಿಸಲು ಗರಿಷ್ಟ ಸಂಯಮ ವಹಿಸುವಂತೆ ಇಸ್ರೇಲ್ ದೇಶವನ್ನು ಆಗ್ರಹಿಸಲಾಗಿದೆ ಎಂದು ಇಯು ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥ ಜೋಸೆಫ್ ಬೊರೆಲ್ ಸೋಮವಾರ ಹೇಳಿದ್ದಾರೆ. ಇಸ್ರೇಲ್-ಹಮಾಸ್ ಯುದ್ಧಕ್ಕೆ ಸಂಬಂಧಿಸಿ ಇಯು ಗುಂಪಿನ ಸದಸ್ಯದೇಶಗಳು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗುಂಪಿನ ಒಗ್ಗಟ್ಟನ್ನು ಪ್ರದರ್ಶಿಸಲು ಆಯೋಜಿಸಲಾದ ಇಯು ವಿದೇಶಾಂಗ ಸಚಿವರ ಸಭೆಯಲ್ಲಿ ಹೊರಡಿಸಲಾದ ಜಂಟಿ ಹೇಳಿಕೆ ಏಕತೆಯ ಪ್ರದರ್ಶನವಾಗಿದೆ ಎಂದು ಬೊರೆಲ್ ಬಣ್ಣಿಸಿದ್ದಾರೆ.
ಇಸ್ರೇಲ್-ಹಮಾಸ್ ನಡುವಿನ ಹಗೆತನವನ್ನು ಅಂತ್ಯಗೊಳಿಸಲು ಗಾಝಾದಲ್ಲಿ ಮಾನವೀಯ ಕದನ ವಿರಾಮಕ್ಕೆ ಕರೆ ನೀಡುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ನಿರ್ಣಯದ ಮೇಲಿನ ಮತದಾನದಲ್ಲಿ ಇಯು ಸದಸ್ಯದೇಶಗಳು ವಿಭಿನ್ನ ನಿಲುವು ತಳೆದಿದ್ದವು. ಇದು ಇಯು ಬಣದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿರುವ ಶಂಕೆಗೆ ಕಾರಣವಾಗಿತ್ತು. ಇಯು ದೇಶಗಳ ನಿರ್ಣಯದಲ್ಲಿ ಕದನ ವಿರಾಮದ ಉಲ್ಲೇಖ ಇಲ್ಲದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಜರ್ಮನ್ ವಿದೇಶಾಂಗ ಸಚಿವೆ ಅನಲೀನಾ ಬೇರ್ಬಾಕ್ ` ಈ ಭಯಾನಕ ಪರಿಸ್ಥಿತಿಯಲ್ಲಿ ಕದನ ವಿರಾಮದ ಪ್ರಶ್ನೆ ಎಲ್ಲಿಂದ ಬರುತ್ತದೆ? 200ರಷ್ಟು ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆ, ಇಸ್ರೇಲ್ನ ಭದ್ರತೆ ಖಾತರಿಯಾಗದೆ ಕದನ ವಿರಾಮ ಸಾಧ್ಯವೇ ? ಎಂದು ಪ್ರತಿಕ್ರಿಯಿಸಿದ್ದಾರೆ.