ಸಿರಿಯಾದ ಆರ್ಥಿಕ ಕ್ಷೇತ್ರಗಳ ಮೇಲಿನ ನಿರ್ಬಂಧ ಅಮಾನತುಗೊಳಿಸಿದ ಇಯು

ಅಹ್ಮದ್ ಅಲ್-ಶರಾ PC | X@GLOBE EYE NEWS
ಬ್ರಸೆಲ್ಸ್: ಶಕ್ತಿ, ಬ್ಯಾಂಕಿಂಗ್, ಸಾರಿಗೆ ಮತ್ತು ಪುನರ್ನಿರ್ಮಾಣಕ್ಕೆ ಸಂಬಂಧಿಸಿದ ನಿರ್ಬಂಧಗಳು ಸೇರಿದಂತೆ ಸಿರಿಯಾದ ಪ್ರಮುಖ ಆರ್ಥಿಕ ಕ್ಷೇತ್ರಗಳ ಮೇಲಿನ ನಿರ್ಬಂಧಗಳನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸುವುದಾಗಿ ಯುರೋಪಿಯನ್ ಯೂನಿಯನ್ ದೇಶಗಳು ಸೋಮವಾರ ಘೋಷಿಸಿವೆ.
ಸಿರಿಯಾದಲ್ಲಿ ವ್ಯಕ್ತಿಗಳು ಮತ್ತು ಆರ್ಥಿಕ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಯುರೋಪಿಯನ್ ಯೂನಿಯನ್ ಹಲವಾರು ನಿರ್ಬಂಧಗಳನ್ನು ಜಾರಿಗೊಳಿಸಿತ್ತು. ಡಿಸೆಂಬರ್ನಲ್ಲಿ ಮಾಜಿ ಅಧ್ಯಕ್ಷ ಬಶರ್ ಅಸ್ಸಾದ್ರನ್ನು ಬಂಡುಕೋರ ಗುಂಪು ಪದಚ್ಯುತಗೊಳಿಸಿದ ಬಳಿಕ ಯುರೋಪಿಯನ್ ನಾಯಕರು ಸಿರಿಯಾದ ಕಡೆಗಿನ ತಮ್ಮ ಧೋರಣೆಯ ಬಗ್ಗೆ ಮರುಚಿಂತನೆ ನಡೆಸಲು ಆರಂಭಿಸಿದ್ದರು.
ಈ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ಸೋಮವಾರ ಬ್ರಸೆಲ್ಸ್ನಲ್ಲಿ ಸಭೆ ಸೇರಿದ ಯುರೋಪಿಯನ್ ಯೂನಿಯನ್ ವಿದೇಶಾಂಗ ಸಚಿವರು ತೈಲ, ಗ್ಯಾಸ್, ವಿದ್ಯುಚ್ಛಕ್ತಿ ಮತ್ತು ಸಾರಿಗೆ ಕ್ಷೇತ್ರಗಳ ಮೇಲಿನ ನಿರ್ಬಂಧಗಳನ್ನು ಅಮಾನತುಗೊಳಿಸಲು ಸಮ್ಮತಿಸಿದ್ದಾರೆ. ಜತೆಗೆ, ಐದು ಬ್ಯಾಂಕ್ಗಳ ಆಸ್ತಿಯನ್ನು ಸ್ಥಂಭನಗೊಳಿಸುವ ಆದೇಶವನ್ನು ತೆರವುಗೊಳಿಸಿದ್ದು ಸಿರಿಯನ್ ಸೆಂಟ್ರಲ್ ಬ್ಯಾಂಕ್ ಮೇಲಿನ ನಿರ್ಬಂಧಗಳನ್ನು ಸೀಮಿತಗೊಳಿಸಲು, ಮಾನವೀಯ ನೆರವು ಪೂರೈಕೆಗೆ ಅನುಕೂಲವನ್ನು ವಿಸ್ತರಿಸಲು ಇಯು ನಿರ್ಧರಿಸಿದೆ ಎಂದು ವರದಿಯಾಗಿದೆ.