ಯುರೋಪಿಯನ್ ಯೂನಿಯನ್ನ ಆಸ್ತಿ ಮುಟ್ಟುಗೋಲು; ರಶ್ಯ ಎಚ್ಚರಿಕೆ
ಮಾಸ್ಕೊ: ಸ್ಥಂಭನಗೊಂಡಿರುವ ರಶ್ಯದ ನಿಧಿಯನ್ನು ಉಕ್ರೇನ್ಗೆ ಆರ್ಥಿಕ ನೆರವು ಒದಗಿಸಲು ಬಳಸಿದರೆ ಯುರೋಪಿಯನ್ ಯೂನಿಯನ್ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ರಶ್ಯ ರವಿವಾರ ಎಚ್ಚರಿಕೆ ನೀಡಿದೆ.
ಸ್ಥಂಭನಗೊಳಿಸಿರುವ ರಶ್ಯದ ಆಸ್ತಿಗಳಿಂದ ಪಡೆದ ಲಾಭವನ್ನು ಯುದ್ಧದಿಂದ ಜರ್ಝರಿತಗೊಂಡಿರುವ ಉಕ್ರೇನ್ನ ಪುನರ್ನಿರ್ಮಾಣದಲ್ಲಿ ನೆರವಾಗಲು ಬಳಸುವ ನಿಟ್ಟಿನಲ್ಲಿ ಪ್ರಸ್ತಾವನೆಯೊಂದನ್ನು ರೂಪಿಸಲಾಗುತ್ತಿದೆ. ಸ್ಥಂಭನೆಗೊಳಿಸಿರುವ ರಶ್ಯದ ಸಾರ್ವಭೌಮ ಆಸ್ತಿಗಳ ಮೌಲ್ಯ 223.15 ದಶಲಕ್ಷ ಡಾಲರ್ನಷ್ಟಿದೆ ಎಂದು ಯುರೋಪಿಯನ್ ಕಮಿಷನ್ನ ಅಧ್ಯಕ್ಷೆ ಉರ್ಸುಲಾ ವಾಂಡರ್ ಲಿಯೆನ್ ಶುಕ್ರವಾರ ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಶ್ಯ ಸಂಸತ್ನ ಕೆಳಮನೆ ಡ್ಯೂಮದ ಅಧ್ಯಕ್ಷ ವ್ಯಚೆಸ್ಲಾವ್ ವೊಲೊದಿನ್ ‘ ರಶ್ಯದ ಆಸ್ತಿಗಳ ವಿರುದ್ಧ(ಇದರಲ್ಲಿ ಹೆಚ್ಚಿನವುಗಳನ್ನು ಬೆಲ್ಜಿಯಂನಲ್ಲಿ ತಡೆಹಿಡಿಯಲಾಗಿದೆ) ಯುರೋಪಿಯನ್ ಯೂನಿಯನ್ ಕ್ರಮಕ್ಕೆ ಮುಂದಾದರೆ ಇದಕ್ಕೆ ರಶ್ಯ ನೀಡುವ ತಿರುಗೇಟಿನಿಂದ ಭಾರೀ ಬೆಲೆ ತೆರಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ಯುರೋಪಿಯನ್ ಕಮಿಷನ್ ಅಧ್ಯಕ್ಷೆಯ ನೇತೃತ್ವದಲ್ಲಿ ಹಲವಾರು ಯುರೋಪಿಯನ್ ರಾಜಕಾರಣಿಗಳು ಮತ್ತೊಮ್ಮೆ ಸ್ಥಂಭನಗೊಳಿಸಿರುವ ನಮ್ಮ ಹಣವನ್ನು ಕದಿಯುವ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ನಮ್ಮ ಹಣದಿಂದ ಉಕ್ರೇನ್ ಅನ್ನು ಮಿಲಿಟರೀಕರಣಗೊಳಿಸುವ ಇಂತಹ ನಿರ್ಧಾರಗಳ ವಿರುದ್ಧ ರಶ್ಯ ತೀವ್ರವಾಗಿ ಪ್ರತಿಕ್ರಿಯಿಸಲಿದೆ ಮತ್ತು ನಮ್ಮ ಸ್ನೇಹಿತರಲ್ಲದ ದೇಶಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತೇವೆ’ ಎಂದು ವೊಲೊದಿನ್ ಹೇಳಿದ್ದಾರೆ.