ಕೆನಡಾದಲ್ಲಿ ಕಾನೂನಿನ ಎದುರು ಎಲ್ಲರೂ ಸಮಾನರು: ಪ್ರಧಾನಿ ಜಸ್ಟಿನ್ ಟ್ರೂಡೊ
PC : twitter/maveinlux
ಟೊರಂಟೊ : ಎಲ್ಲರಿಗೂ ಸಮಾನ ಕಾನೂನು ವ್ಯವಸ್ಥೆಯನ್ನು ಹೊಂದಿರುವ ದೇಶವಾಗಿರುವ ಕೆನಡಾದಲ್ಲಿ ಬಲಿಷ್ಟ ಮತ್ತು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯಿದೆ. ಮತ್ತು ತನ್ನ ಪ್ರಜೆಗಳನ್ನು ರಕ್ಷಿಸುವ ಮೂಲಭೂತ ಬದ್ಧತೆಯನ್ನು ಹೊಂದಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊ ಹೇಳಿದ್ದಾರೆ.
ಖಾಲಿಸ್ತಾನ್ ಮುಖಂಡ ಹರ್ದೀಪ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಮೂವರು ಭಾರತೀಯ ಪ್ರಜೆಗಳ ವಿರುದ್ಧ ಆರೋಪ ದಾಖಲಿಸಿದ ಬಗ್ಗೆ ಅವರು ಪ್ರತಿಕ್ರಿಯಿಸುತ್ತಿದ್ದರು. ಮೂವರ ಬಂಧನದ ಬಗ್ಗೆ ಮಾಹಿತಿ ನೀಡಿರುವ ಕೆನಡಾ ಪೊಲೀಸರು ಅಮೆರಿಕದ ಕಾನೂನು ಜಾರಿ ಏಜೆನ್ಸಿಗಳ ಜತೆ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದ್ದಾರೆ.
ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಪ್ರಗತಿ ಸಾಧಿಸಲಾಗಿದೆ. ಬಂಧಿತರ ವಿಚಾರಣೆ ನಡೆಯುತ್ತಿದೆ. ಆದರೆ ತನಿಖೆ ಈ ಮೂವರ ಪಾತ್ರದ ಬಗ್ಗೆ ಮಾತ್ರ ಸೀಮಿತವಾಗಿರುವುದಿಲ್ಲ. ನಿಜ್ಜಾರ್ ಹತ್ಯೆಯ ಬಳಿಕ ಕೆನಡಾದ ಸಿಖ್ ಸಮುದಾಯದಲ್ಲಿ ಹಲವರಲ್ಲಿ ಅಭದ್ರತೆಯ ಭಾವನೆ ಮೂಡಿದೆ. ಆದರೆ ಕೆನಡಾದಲ್ಲಿ ಹಿಂಸೆಯ ಬೆದರಿಕೆಗೆ ಬಗ್ಗದೆ ಎಲ್ಲಾ ಪ್ರಜೆಗಳಿಗೂ ಸುರಕ್ಷಿತವಾಗಿ ಬದುಕುವ ಮೂಲಭೂತ ಹಕ್ಕು ಇದೆ' ಎಂದು ಟ್ರೂಡೊ ಹೇಳಿದ್ದಾರೆ.