ಕಾರ್ಮಿಕರ ಮೇಲೆ `ಅತಿಯಾದ' ಕಣ್ಗಾವಲು ; ಅಮೆಝಾನ್ ಗೆ 34 ದಶಲಕ್ಷ ಡಾಲರ್ ದಂಡ
ಪ್ಯಾರಿಸ್ : ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಗಮನಿಸಲು `ಅತಿಯಾದ' ಕಣ್ಗಾವಲು ವ್ಯವಸ್ಥೆಗಾಗಿ ಅಮೆಝಾನ್ ಸಂಸ್ಥೆಯ ಫ್ರಾನ್ಸ್ ನ ಗೋದಾಮು ಘಟಕಕ್ಕೆ 34.9 ದಶಲಕ್ಷ ಡಾಲರ್ ದಂಡ ವಿಧಿಸಿರುವುದಾಗಿ ಫ್ರಾನ್ಸ್ ನ ಡೇಟಾ ಸುರಕ್ಷತಾ ಏಜೆನ್ಸಿ ಹೇಳಿದೆ.
ಪ್ಯಾಕೇಜ್ ಗಳ ಪರಿಷ್ಕರಣೆಗೆ ಸಿಬ್ಬಂದಿಗಳು ಬಳಸುವ ಸ್ಕ್ಯಾನರ್ ಗಳ ಡೇಟಾ ಮೂಲಕ ಸಿಬ್ಬಂದಿಗಳ ಕಾರ್ಯವನ್ನು ಈ ಘಟಕ ಮೇಲ್ವಿಚಾರಣೆ ಮಾಡುತ್ತಿತ್ತು. ಪ್ಯಾಕೇಜ್ ಗಳು ಮತ್ತು ಪಾರ್ಸೆಲ್ಗಳ ನಿರ್ವಹಣೆ ಕಾರ್ಯ 10 ನಿಮಿಷಕ್ಕಿಂತಲೂ ಹೆಚ್ಚು ನಿಷ್ಕ್ರಿಯಗೊಂಡರೆ ಈ ಸ್ಲ್ಯಾನರ್ ವ್ಯವಸ್ಥಾಪಕರಿಗೆ ಎಚ್ಚರಿಕೆಯ ಸಂದೇಶ ರವಾನಿಸುತ್ತಿತ್ತು. ಸಿಬ್ಬಂದಿಗಳು ಗೋದಾಮನ್ನು ಪ್ರವೇಶಿಸುವ ಮತ್ತು ಗೋದಾಮಿಂದ ಹೊರತೆರಳುವ ಸಮಯವನ್ನೂ ಈ ಸ್ಕ್ಯಾನರ್ ಗಮನಿಸುತ್ತಿತ್ತು. ಆದ್ದರಿಂದ ವಿಪರೀತ ಒತ್ತಡದಲ್ಲಿ ಸಿಬ್ಬಂದಿಗಳು ಕೆಲಸ ಮಾಡಬೇಕಿತ್ತು. ಈ ಮೇಲ್ವಿಚಾರಣೆ ವ್ಯವಸ್ಥೆಯು ಯುರೋಪಿಯನ್ ಯೂನಿಯನ್ ಸಾಮಾನ್ಯ ಡೇಟಾ ರಕ್ಷಣೆ ನಿಯಮದ ಉಲ್ಲಂಘನೆಯೆಂದು ಪರಿಗಣಿಸಿ 34.9 ದಶಲಕ್ಷ ಡಾಲರ್ ದಂಡ ತೆರುವಂತೆ ಆದೇಶಿಸಲಾಗಿದೆ ಎಂದು ವರದಿಯಾಗಿದೆ. ಆದರೆ ಇದನ್ನು ತಿರಸ್ಕರಿಸಿರುವ ಅಮೆಝಾನ್ ವಕ್ತಾರ `ಇಂತಹ ವ್ಯವಸ್ಥೆಯು ಭದ್ರತೆ, ಗುಣಮಟ್ಟ ಮತ್ತು ಕಾರ್ಯಕ್ಷಮತೆಯನ್ನು' ದೃಢೀಕರಿಸಲು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದು ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಕಾಯ್ದಿರಿಸಿರುವುದಾಗಿ ಹೇಳಿದ್ದಾರೆ.