ಗಾಝಾದಿಂದ ಇಸ್ರೇಲ್ ಗೆ ರಫ್ತು ಪುನರಾರಂಭ
Photo : twitter/mena_trends
ಗಾಝಾ ಸಿಟಿ : ಪ್ರಮುಖ ವ್ಯಾಪಾರ ಗಡಿದಾಟು(ಬಾರ್ಡರ್ ಕ್ರಾಸಿಂಗ್)ವನ್ನು ಮತ್ತೆ ತೆರೆದಿರುವುದರಿಂದ ಗಾಝಾದಿಂದ ಇಸ್ರೇಲ್ ಗೆ ರಫ್ತು ರವಿವಾರ ಪುನರಾರಂಭಗೊಂಡಿದೆ ಎಂದು ಫೆಲೆಸ್ತೀನಿನ ಅಧಿಕಾರಿಗಳು ಹೇಳಿದ್ದಾರೆ.
ಇಸ್ರೇಲ್ ನಿಂದ ಕೆರೆಮ್ ಶಲೊಮ್ ಗಡಿದಾಟು ಮೂಲಕ ಸರಕು ರಫ್ತಿನ ನೆಪದಲ್ಲಿ ಸ್ಫೋಟಕಗಳ ಕಳ್ಳಸಾಗಣೆ ನಡೆಯುತ್ತಿದೆ ಎಂದು ಆರೋಪಿಸಿ ಕಳೆದ ವಾರ ಗಡಿದಾಟನ್ನು ಮುಚ್ಚಿದ್ದ ಇಸ್ರೇಲ್ ರಫ್ತಿನ ಮೇಲೆ ನಿಷೇಧ ವಿಧಿಸಿತ್ತು. ಗಾಝಾ ಮತ್ತು ಇಸ್ರೇಲ್ ನಡುವೆ ಸರಕು ಸಾಗಣೆಯ ಏಕೈಕ ಮಾರ್ಗ ಇದಾಗಿದೆ. ರಫ್ತಿಗೆ ತಡೆ ಒಡ್ಡಿರುವುದು ಗಾಝಾ ಪಟ್ಟಿಯಲ್ಲಿ ಮಾನವೀಯ ದುರಂತಕ್ಕೆ ಕಾರಣವಾಗಬಹುದು ಎಂದು ಫೆಲಸ್ತೀನಿನ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದರು.
ಸುಮಾರು 2.3 ದಶಲಕ್ಷ ಫೆಲಸ್ತೀನೀಯರು ನೆಲೆಸಿರುವ ಗಾಝಾ ಪ್ರದೇಶವು ಇಸ್ರೇಲಿನ ಕಠಿಣ ದಿಗ್ಬಂಧನ ಅಡಿಯಲ್ಲಿದೆ. `ರವಿವಾರ ಬೆಳಿಗ್ಗೆ ಕೆರೆಮ್ ಶಲೋಮ್ ಗಡಿದಾಟನ್ನು ತೆರೆಯಲಾಗಿದ್ದು ಹಲವು ಟ್ರಕ್ ಗಳು ಇಸ್ರೇಲಿನತ್ತ ಮುಂದುವರಿದಿವೆ' ಎಂದು ಸರಕು ಸಮನ್ವಯಕ್ಕಾಗಿನ ಫೆಲಸ್ತೀನ್ ಅಧ್ಯಕ್ಷರ ಸಮಿತಿಯ ಮುಖ್ಯಸ್ಥ ರಯೀದ್ ಫತಾಹ್ ಹೇಳಿದ್ದಾರೆ. ಇಸ್ರೇಲ್-ಫೆಲಸ್ತೀನ್ ನಡುವಿನ ಸಂಘರ್ಷ ಮತ್ತು ಹಿಂಸಾಚಾರಕ್ಕೆ ಈ ವರ್ಷದ ಆರಂಭದ 8 ತಿಂಗಳಲ್ಲಿ ಕನಿಷ್ಟ 227 ಫೆಲಸ್ತೀನೀಯರು ಹಾಗೂ ಕನಿಷ್ಟ 32 ಇಸ್ರೇಲ್ ಪ್ರಜೆಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ.