ವಾಸ್ತವವನ್ನು ಅರಿತುಕೊಳ್ಳಿ: ಚೀನಾಕ್ಕೆ ತೈವಾನ್ ಆಗ್ರಹ
elect Lai Ching-te | Photo: newindianexpress.com
ತೈಪೆ : ವಾಸ್ತವವನ್ನು ಎದುರಿಸುವಂತೆ ಹಾಗೂ ತನ್ನ ಚುನಾವಣೆಯ ಫಲಿತಾಂಶವನ್ನು ಗೌರವಿಸುವಂತೆ ತೈವಾನ್ ಚೀನಾವನ್ನು ಆಗ್ರಹಿಸಿದೆ.
ಚೀನಾದ ನಿರಂತರ ಒತ್ತಡ ಹಾಗೂ ಬೆದರಿಕೆಯನ್ನು ಧಿಕ್ಕರಿಸಿದ ತೈವಾನ್ ಜನತೆ ದೇಶದ ಸಾರ್ವಭೌಮತ್ವವನ್ನು ಪ್ರತಿಪಾದಿಸುವ `ಡೆಮೊಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ(ಡಿಪಿಪಿ)ಯ ಮುಖಂಡ ಲೈ ಚಿಂಗ್-ಟೆರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು.
ಲೈ ಚೆಂಗ್-ಟೆ ಅಪಾಯಕಾರಿ ಪ್ರತ್ಯೇಕತಾವಾದಿಯಾಗಿದ್ದು ಅವರನ್ನು ಚುನಾಯಿಸಬಾರದು. ಈ ಚುನಾವಣೆ ಯುದ್ಧ ಮತ್ತು ಶಾಂತಿಯನ್ನು ನಿರ್ಧರಿಸುವ ಚುನಾವಣೆ ಎಂದು ಚೀನಾ ನಿರಂತರವಾಗಿ ತೈವಾನ್ ಮತದಾರರ ಮೇಲೆ ಒತ್ತಡ ಹೇರಿತ್ತು. ತೈವಾನ್ನ ಹಾಲಿ ಉಪಾಧ್ಯಕ್ಷ ಲೈ ಅವರ ಡಿಪಿಪಿ ಪಕ್ಷ ತೈವಾನ್ನ ಪ್ರತ್ಯೇಕ ಅಸ್ಮಿತೆಯನ್ನು ಬೆಂಬಲಿಸುತ್ತದೆ ಮತ್ತು ಚೀನಾದ ಪ್ರಾದೇಶಿಕ ಪ್ರತಿಪಾದನೆಯನ್ನು ತಿರಸ್ಕರಿಸುತ್ತಿದೆ.
ಆದರೆ ಲೈ ಅವರ ಗೆಲುವನ್ನು ತಿರಸ್ಕರಿಸುವುದಾಗಿ ಹೇಳಿರುವ ಚೀನಾ, ಈ ಗೆಲುವು ಚೀನಾದ ಜತೆಗಿನ ತೈವಾನ್ನ ಅನಿವಾರ್ಯ ಪುನರೇಕೀಕರಣದ ಮೇಲೆ ಪರಿಣಾಮ ಬೀರದು ಎಂದಿದೆ. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ತೈವಾನ್ನ ವಿದೇಶಾಂಗ ಇಲಾಖೆ `ಚೀನಾವು ವಾಸ್ತವವನ್ನು ಅರಿತುಕೊಂಡು ತೈವಾನ್ ಜನರ ಆಶಯ, ನಿರ್ಧಾರವನ್ನು ಗೌರವಿಸಬೇಕು' ಎಂದು ಆಗ್ರಹಿಸಿದೆ. ಚೀನಾದ ಬೆದರಿಕೆಯಿಂದ ದ್ವೀಪರಾಷ್ಟ್ರವನ್ನು ರಕ್ಷಿಸಿಕೊಳ್ಳಲು ನೂತನ ಸರಕಾರ ಬದ್ಧವಾಗಿದೆ ಎಂದಿದೆ.