ಇರಾನ್-ಇಸ್ರೇಲ್ ಸಂಘರ್ಷ ಉಲ್ಬಣ: ಮಧ್ಯಪ್ರಾಚ್ಯದಲ್ಲಿ ಯುದ್ಧಭೀತಿ
Photo credit: PTI
ಬೈರೂತ್: ಇರಾನ್, ಹಮಾಸ್ ಮತ್ತು ಹಿಜ್ಬುಲ್ಲಾ ಸಂಘಟನೆಗಳು ತಮ್ಮ ಗುಂಪಿನ ನಾಯಕರ ಹತ್ಯೆಗೆ ಇಸ್ರೇಲ್ ಹೊಣೆ ಎಂಬ ನೇರ ಆರೋಪ ಮಾಡಿದ್ದು, ಆ ದೇಶದ ವಿರುದ್ಧ ಪ್ರತೀಕಾರದ ಎಚ್ಚರಿಕೆ ನೀಡಿವೆ. ಇದು ಮಧ್ಯಪ್ರಾಚ್ಯ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾಗಿದ್ದು, ಪ್ರಾದೇಶಿಕ ಯುದ್ಧದ ಭೀತಿ ದಟ್ಟವಾಗಿದೆ.
ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರನ್ನು ಟೆಹ್ರಾನ್ನಲ್ಲಿ ಹತ್ಯೆ ಮಾಡಿದ ಕೆಲವೇ ಗಂಟೆಗಳಲ್ಲಿ ಹಿಜ್ಬುಲ್ಲಾ ಮಿಲಿಟರಿ ನಾಯಕ ಫೌದ್ ಶುಕ್ರ್ ಅವರ ಹತ್ಯೆ ಬೈರೂತ್ ನಲ್ಲಿ ನಡೆದಿದ್ದು, ಇದರ ವಿರುದ್ಧ ಪ್ರತೀಕಾರದ ದಾಳಿ ನಡೆಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಕಳೆದ ಅಕ್ಟೋಬರ್ ನಿಂದ ಹಿಜ್ಬುಲ್ಲಾ ಪ್ರತಿದಿನ ಇಸ್ರೇಲ್ ವಿರುದ್ಧ ಗಡಿಯಾಚೆಗಿನ ಸಂಘರ್ಷದಲ್ಲಿ ತೊಡಗಿದ್ದು, ಹಮಾಸ್ಗೆ ಬೆಂಬಲಾರ್ಥವಾಗಿ ದಾಳಿ ನಡೆಸುತ್ತಾ ಬಂದಿದೆ. ಉತ್ತರ ಇಸ್ರೇಲಿ ನೆಲೆ ಬೀಯಟ್ ಹಿಲಾಲ್ನಲ್ಲಿ ಕತ್ಯುಷಾ ರಾಕೆಟ್ಗಳನ್ನು ಸುಟ್ಟುಹಾಕಿರುವುದಾಗಿ ಹಿಜ್ಬುಲ್ಲಾ ಹೇಳಿಕೆ ನೀಡಿದೆ. ಕೇವಲ ಮಿಲಿಟರಿ ಗುರಿಗಳ ಮೇಲೆ ಮಾತ್ರವಲ್ಲದೇ ಇಸ್ರೇಲ್ನ ಒಳನುಗ್ಗಿ ಹಿಜ್ಬುಲ್ಲಾ ದಾಳಿ ನಡೆಸುವ ನಿರೀಕ್ಷೆ ಇದೆ ಎಂದು ಇರಾನ್ ಹೇಳಿದೆ.
ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆ ಪ್ರಬಲವಾಗಿರುವ ಲೆಬನಾನ್ನಿಂದ ತನ್ನ ಪ್ರಜೆಗಳು ವಾಪಸ್ಸಾಗುವಂತೆ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ಕರೆ ನೀಡಿದ್ದು, ಎಲ್ಲ ವಿಮಾನಗಳನ್ನು ರದ್ದುಪಡಿಸಿವೆ. ಇಸ್ರೇಲ್ಗೆ ಪ್ರಯಾಣ ಮಾಡದಂತೆ ಇಟೆಲಿ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದ್ದು, ಪ್ರಾದೇಶಿಕ ಶಸ್ತ್ರಾಸ್ತ್ರ ಸಂಘರ್ಷದಿಂದಾಗಿ ಭದ್ರತೆಗೆ ಅಪಾಯ ಇದೆ ಎಂದು ಹೇಳಿದೆ.