20 ವರ್ಷ ಯಾವ ಕೆಲಸವೂ ನೀಡದೇ ಪೂರ್ಣ ವೇತನ: ಟೆಲಿಕಾಂ ಕಂಪನಿ ವಿರುದ್ಧ ಮಹಿಳಾ ಉದ್ಯೋಗಿ ದೂರು !
ಸಾಂದರ್ಭಿಕ ಚಿತ್ರ PC:freepik
ಪ್ಯಾರೀಸ್: ತನಗೆ 20 ವರ್ಷಗಳ ಕಾಲ ಯಾವ ಕೆಲಸವನ್ನೂ ನೀಡದೇ ಸಂಪೂರ್ಣ ವೇತನ ನೀಡುತ್ತಿರುವ ದೂರಸಂಪರ್ಕ ಕ್ಷೇತ್ರದ ಪ್ರಮುಖ ಕಂಪನಿ ಆರೆಂಜ್ ವಿರುದ್ಧ ಫ್ರಾನ್ಸ್ ನ ಮಹಿಳಾ ಉದ್ಯೋಗಿಯೊಬ್ಬರು ದಾವೆ ಹೂಡಿರುವ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
ಅಂಗವೈಕಲ್ಯದ ಕಾರಣದಿಂದ ವರ್ಗಾವಣೆ ಕೇಳಿದ್ದಕ್ಕಾಗಿ ಕಂಪನಿ ತಮ್ಮನ್ನು ಮೂಲೆಗುಂಪು ಮಾಡಿದೆ ಎಂದು ಲಾರೆನ್ಸ್ ವಾನ್ ವೆಸೆನ್ಹೋವ್ ದೂರು ನೀಡಿದ್ದಾರೆ. ಆಂಶಿಕ ಪಾಶ್ರ್ವ ವಾಯು ಮತ್ತು ಅಪಸ್ಮಾರದಿಂದ ಬಳಲುತ್ತಿರುವ ಇವರನ್ನು 1993ರಲ್ಲಿ ಫ್ರಾನ್ಸ್ ಟೆಲಿಕಾಂ ನೇಮಕ ಮಾಡಿಕೊಂಡಿತ್ತು.
ಆರಂಭದಲ್ಲಿ ಈಕೆಯ ಇತಿಮಿತಿಯಲ್ಲಿ ಸೂಕ್ತ ಹೊಣೆಯನ್ನು ವಹಿಸಲಾಗಿತ್ತು ಹಾಗೂ ಕಾರ್ಯದರ್ಶಿಯಾಗಿ ಮತ್ತು ಮಾನವ ಸಂಪನ್ಮೂಲ ವಿಭಾಗದಲ್ಲಿ ಅವರು ಕಾರ್ಯ ನಿರ್ವಹಿಸಿದ್ದರು. ಆದರೆ 2002ರಲ್ಲಿ ಅವರು ಫ್ರಾನ್ಸ್ ನಲ್ಲೇ ಬೇರೆ ಪ್ರದೇಶಕ್ಕೆ ವರ್ಗಾವಣೆ ಕೋರಿದ್ದರು.
ಈ ವರ್ಗಾವಣೆ ಕೋರಿಕೆಯನ್ನು ಕಂಪನಿ ಅನುಮೋದಿಸಿದರೂ, ಹೊಸ ಕಾರ್ಯಸ್ಥಾನವನ್ನು ಆಕೆಯ ಅಗತ್ಯತೆಗಳಿಗೆ ಅನುಗುಣವಾಗಿ ತೋರಿಸಿಲ್ಲ. ಪರ್ಯಾಯವನ್ನು ಒದಗಿಸುವ ಬದಲು, ಆರೆಂಜ್ ಕಂಪನಿ ಅವರಿಗೆ ಯಾವುದೇ ಕೆಲಸ ನೀಡುವುದನ್ನು ಸ್ಥಗಿತಗೊಳಿಸಿತು ಎನ್ನುವುದು ಅವರ ವಕೀಲರ ವಾದ.
ಮುಂದಿನ ಎರಡು ದಶಕಗಳ ಕಾಲ ಸಂಪೂರ್ಣ ವೇತನ ಸ್ವೀಕರಿಸಿದರೂ, ಈ ಪರಿಸ್ಥಿತಿಯಿಂದಾಗಿ ನೈತಿಕ ಕಿರುಕುಳ ಎದುರಿಸಿದ್ದಾಗಿ ಮಹಿಳೆ ದೂರಿದ್ದಾರೆ. ಯಾವುದೇ ಕರ್ತವ್ಯವಿಲ್ಲದೇ ವೇತನ ನೀಡುವುದರಿಂದ ಒಬ್ಬಂಟಿಯಾಗಿರುವ ಜತೆಗೆ ವೃತ್ತಿಪರ ಕೌಶಲವನ್ನು ಕಳೆದುಕೊಂಡಿರುವುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಕಂಪನಿ ಈ ಆರೋಪವನ್ನು ನಿರಾಕರಿಸಿದ್ದು, ವಾನ್ ವಸೆನ್ಹೋವ್ ಅವರ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ, ಸೂಕ್ತ ಸ್ಥಳದಲ್ಲಿ ಕೆಲಸ ನೀಡುವ ಸಾಧ್ಯತೆಯನ್ನು ಪರಿಶೀಲಿಸಿತ್ತು. ಆದರೆ ನಿಯತವಾಗಿ ಅನಾರೋಗ್ಯ ಕಾರಣದ ರಜೆ ಹಾಕುವ ಕಾರಣದಿಂದ ಇದು ಸಾಧ್ಯವಾಗಲಿಲ್ಲ ಎನ್ನುವುದು ಕಂಪನಿ ನೀಡುವ ಸಮರ್ಥನೆ.