ವಿಶ್ವಸಂಸ್ಥೆಯ ಆಹಾರ ನೆರವು ಯೋಜನೆಗೆ ಆರ್ಥಿಕ ಕೊರತೆ
ನಿರಾಶ್ರಿತರ ನೆರವು ಮೊತ್ತದಲ್ಲಿ ಕಡಿತ
ಬೈರೂತ್: ಉಕ್ರೇನ್‌ನಿಂದ ಆಹಾರಧಾನ್ಯ ರಫ್ತಿಗೆ ಸಂಬಂಧಿಸಿದ ಒಪ್ಪಂದ ಸ್ಥಗಿತಗೊಂಡಿರುವುದು ಹಾಗೂ ಆರ್ಥಿಕ ದೇಣಿಗೆಯ ಪ್ರಮಾಣ ಕಡಿಮೆಯಾಗಿರುವುದರಿಂದ ವಿಶ್ವಸಂಸ್ಥೆಯ ಆಹಾರ ನೆರವು ಯೋಜನೆಗೆ ತೀವ್ರ ಆರ್ಥಿಕ ಕೊರತೆ ಎದುರಾಗಿದೆ ಎಂದು ವಿಶ್ವ ಆಹಾರ ಯೋಜನೆ(ಡಬ್ಲ್ಯೂಎಫ್‌ಪಿ)ಯ ಸಹಾಯಕ ಕಾರ್ಯನಿರ್ವಾಹಕ ನಿರ್ದೇಶಕ ಕಾರ್ಲ್ ಸಕಾವ್ ಕಳವಳ ವ್ಯಕ್ತಪಡಿಸಿದ್ದಾರೆ.
‘ಇದೀಗ ಆಹಾರಧಾನ್ಯದ ನೆರವಿಗಾಗಿ ಇತರ ಮೂಲಗಳನ್ನು ಹುಡುಕುವ ಅನಿವಾರ್ಯತೆಯಿದೆ. ಎಲ್ಲಿಂದ ಆಹಾರಧಾನ್ಯ ದೊರಕಲಿದೆ ಎಂಬುದು ತಿಳಿದಿಲ್ಲ, ಆದರೆ ಆಹಾರ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗುವುದಂತೂ ನಿಶ್ಚಿತ’ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.
ಆರ್ಥಿಕ ಸಂಪನ್ಮೂಲದ ಕೊರತೆಯ ಹಿನ್ನೆಲೆಯಲ್ಲಿ ಜೋರ್ಡಾನ್‌ನ ಎರಡು ಪ್ರದೇಶದ ಶಿಬಿರಗಳಲ್ಲಿ ನೆಲೆಸಿರುವ 1,20,000 ಸಿರಿಯಾ ನಿರಾಶ್ರಿತರಿಗೆ ಮಾಸಿಕ ಹಣಕಾಸಿನ ನೆರವಿನ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ಮುಂದಿನ ಹಂತದಲ್ಲಿ ಮತ್ತೆ 50,000 ಸಿರಿಯಾ ನಿರಾಶ್ರಿತರ ಆರ್ಥಿಕ ನೆರವಿನ ಪ್ರಮಾಣ ಕಡಿಮೆಯಾಗಲಿದೆ ಎಂದು ಡಬ್ಲ್ಯೂಎಫ್‌ಪಿ ಹೇಳಿದೆ. ಈ ಕಾರ್ಯಕ್ರಮದಡಿ 4,65,000 ನಿರಾಶ್ರಿತರಿಗೆ ಹಣಕಾಸಿನ ನೆರವು ಒದಗಿಸಲಾಗುತ್ತಿದೆ.
ಈ ನಿರ್ಧಾರದ ಬಗ್ಗೆ ಜೋರ್ಡಾನ್‌ನಲ್ಲಿನ ಸಿರಿಯಾ ನಿರಾಶ್ರಿತರು ತೀವ್ರ ಹತಾಶೆ ವ್ಯಕ್ತಪಡಿಸಿದ್ದಾರೆ. ‘ಹಣದುಬ್ಬರ ಪ್ರಮಾಣ ಹೆಚ್ಚಿದ್ದು ಸರಿಯಾದ ಕೆಲಸವೂ ಸಿಗುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ಡಬ್ಲ್ಯೂಎಫ್‌ಪಿಯ ಹಣಕಾಸಿನ ನೆರವು ಕಡಿತ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ನಿರ್ಧಾರ ನಮ್ಮ ಬದುಕನ್ನು ಸರ್ವನಾಶಗೊಳಿಸಿದೆ. ಮನೆಯ ಬಾಡಿಗೆ, ವಿದ್ಯುತ್ ಬಿಲ್, ನೀರಿನ ಬಿಲ್ ಪಾವತಿಗೆ ಕಷ್ಟವಾಗಿದೆ’ ಎಂದು ಸಿರಿಯ ನಿರಾಶ್ರಿತರು ಅಳಲು ತೋಡಿಕೊಂಡಿದ್ದಾರೆ.
ವಿಶ್ವದಾದ್ಯಂತ ಆಹಾರ ಮತ್ತು ಹಣಕಾಸಿನ ನೆರವು ಕಾರ್ಯಕ್ರಮ ಮುಂದುವರಿಯಲು ಈ ವರ್ಷ ಸುಮಾರು 10ರಿಂದ 14 ಶತಕೋಟಿ ಡಾಲರ್ ಮೊತ್ತದ ಅಗತ್ಯವಿದೆ. ಆದರೆ ಅಂತರ್‌ರಾಷ್ಟ್ರೀಯ ದೇಣಿಗೆದಾರರಿಂದ ಇದುವರೆಗೆ ಕೇವಲ 5 ಶತಕೋಟಿ ಡಾಲರ್ ನಿಧಿ ಸಂಗ್ರಹಿಸಲಾಗಿದೆ. ಈ ಅಸಾಮಾನ್ಯ ಹಣಕಾಸಿನ ಬಿಕ್ಕಟ್ಟಿನಿಂದಾಗಿ ವಿಶ್ವದಾದ್ಯಂತದ ನೆರವು ಪ್ರಮಾಣದಲ್ಲಿ ಕಡಿತ ಅನಿವಾರ್ಯವಾಗಿದೆ ಎಂದು ಡಬ್ಲ್ಯೂಎಫ್‌ಪಿ ಕಳೆದ ವಾರ ಘೋಷಿಸಿದೆ.
ಮಧ್ಯಪ್ರಾಚ್ಯದ ಜೋರ್ಡಾನ್, ಲೆಬನಾನ್ ಮುಂತಾದ ಕೆಲ ದೇಶಗಳು ತಮ್ಮದೇ ಆದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದರೂ ಯುದ್ಧದಿಂದ ಜರ್ಝರಿತಗೊಂಡಿರುವ ಸಿರಿಯಾ ದೇಶದ ಲಕ್ಷಾಂತರ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿವೆ. ಈ ನಿರಾಶ್ರಿತರಿಗೆ ನೆರವು ಒದಗಿಸುತ್ತಿರುವ ವಿಶ್ವಸಂಸ್ಥೆಯ ಏಜೆನ್ಸಿಗಳು ಹಾಗೂ ಇತರ ಅಂತರ್‌ರಾಷ್ಟ್ರೀಯ ಮಾನವೀಯ ನೆರವಿನ ಸಂಘಟನೆಗಳು ಕೊರೋನ ಸಾಂಕ್ರಾಮಿಕದ ನಂತರ ಹಣಕಾಸಿನ ತೀವ್ರ ಕೊರತೆ ಎದುರಿಸುತ್ತಿವೆ.
ಕಳೆದ 12 ವರ್ಷದಿಂದ ಮುಂದುವರಿದಿರುವ ಅಂತರ್ಯುದ್ಧದಿಂದ ತತ್ತರಿಸಿರುವ ಸಿರಿಯಾದಲ್ಲಿ ತುರ್ತು ನೆರವಿನ ಅಗತ್ಯವಿರುವ 5.5 ದಶಲಕ್ಷ ಜನರಲ್ಲಿ 2.5 ದಶಲಕ್ಷ ಜನತೆಗೆ ನೆರವಿನ ಪ್ರಮಾಣದಲ್ಲಿ ಕಡಿತಗೊಳಿಸುವುದಾಗಿ ಜೂನ್‌ನಲ್ಲಿ ವಿಶ್ವ ಆಹಾರ ಯೋಜನೆ ಘೋಷಿಸಿದೆ.
ನಿರಾಶ್ರಿತರಿಗೆ ನೆರವಿನ ಪ್ರಮಾಣ ಕಡಿತಗೊಂಡರೆ ಮುಂದಿನ ಒಂದು ವರ್ಷದಲ್ಲಿ ಉಪವಾಸ ಬೀಳುವವರ ಪ್ರಮಾಣ ಮತ್ತು ಸಾಮೂಹಿಕ ವಲಸೆ ಹೆಚ್ಚಲಿದ್ದು ದೇಶಗಳನ್ನು ಅಸ್ಥಿರಗೊಳಿಸಲಿದೆ. ಆಹಾರದ ಅಭದ್ರತೆಯ ಅತ್ಯಂತ ನಿರ್ಣಾಯಕ ಹಂತಗಳಲ್ಲಿ ದುರ್ಬಲರಿಗೆ ನಮ್ಮ ಆಹಾರ ನೆರವು ಸಿಗದಿದ್ದರೆ ಅವರಿಗೆ ‘ ಸಾಯುವುದು ಅಥವಾ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುವುದು’ ಎಂಬ 2 ಆಯ್ಕೆ ಮಾತ್ರ ಇರಲಿದೆ’ ಎಂದು ವಿಶ್ವ ಆಹಾರ ಯೋಜನೆಯ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಡೇವಿಡ್ ಬೆಸ್ಲೆ ಎಚ್ಚರಿಕೆ ನೀಡಿದ್ದಾರೆ.