ದಕ್ಷಿಣ ಕೊರಿಯಾ ಬ್ಯಾಟರಿ ಕಾರ್ಖಾನೆಯಲ್ಲಿ ಅಗ್ನಿದುರಂತ | 20 ಮಂದಿ ಮೃತ್ಯು
ದಕ್ಷಿಣ ಕೊರಿಯಾದ ಲಿಥಿಯಂ ಬ್ಯಾಟರಿ ಕಾರ್ಖಾನೆ PC: timesofindia
ಸಿಯೋಲ್: ದಕ್ಷಿಣ ಕೊರಿಯಾದ ಲಿಥಿಯಂ ಬ್ಯಾಟರಿ ಕಾರ್ಖಾನೆಯಲ್ಲಿ ಸೋಮವಾರ ಸಂಭವಿಸಿದ ಭಾರೀ ಅಗ್ನಿದುರಂತದಲ್ಲಿ ಕನಿಷ್ಠ 20 ಮಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಯೊನ್ಹಾಪ್ ಸುದ್ಧಿಸಂಸ್ಥೆ ವರದಿ ಮಾಡಿದೆ.
ರಾಜಧಾನಿ ಸಿಯೋಲ್ನ ಬಳಿಯಿರುವ ಹ್ವಸಿಯಾಂಗ್ ನಗರದಲ್ಲಿ ಏರ್ಸೆಲ್ ಸಂಸ್ಥೆಯ ಬ್ಯಾಟರಿಗಳ ಉತ್ಪಾದನಾ ಸಂಸ್ಥೆಯ ಮಾಲಕತ್ವದ ಕಾರ್ಖಾನೆಯಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಗೆ (ಸ್ಥಳೀಯ ಕಾಲಮಾನ) ಬೆಂಕಿ ಕಾಣಿಸಿಕೊಂಡಿದೆ. ಕಾರ್ಖಾನೆಯ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಬ್ಯಾಟರಿ ಸೆಲ್ಗಳು ಸ್ಫೋಟಗೊಂಡು ಬೆಂಕಿ ಕ್ಷಣಾರ್ಧದಲ್ಲಿ ಹರಡಿದೆ. ಆ ಸಂದರ್ಭ ಕಾರ್ಖಾನೆಯಲ್ಲಿ 100ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಹಲವು ಗಂಟೆಗಳ ಕಾರ್ಯಾಚರಣೆಯಲ್ಲಿ ಬೆಂಕಿಯನ್ನು ನಿಯಂತ್ರಿಸಲಾಗಿದ್ದು 20 ಮಂದಿಯ ಮೃತದೇಹ ಪತ್ತೆಯಾಗಿದೆ. 4 ಮಂದಿ ಗಂಭೀರ ಗಾಯಗೊಂಡಿದ್ದು 78 ಕಾರ್ಮಿಕರು ಸುರಕ್ಷಿತವಾಗಿರುವುದು ದೃಢಪಟ್ಟಿದೆ. ಕಟ್ಟಡದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ಕಿಮ್ ಜಿನ್ಯಂಗ್ ಹೇಳಿದ್ದಾರೆ.
ಲಿಥಿಯಂ ಬ್ಯಾಟರಿಗಳು ಸ್ಫೋಟಗೊಂಡಿರುವ ಜತೆಗೆ ಹೊಗೆಯ ಕಾರ್ಮೋಡ ನಗರವನ್ನು ವ್ಯಾಪಿಸಿದ್ದು ಸ್ಥಳೀಯರು ಮನೆಯ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಸಾಧ್ಯವಿದ್ದರೆ ಮನೆಯೊಳಗೇ ಇರುವಂತೆ ಅಧಿಕಾರಿಗಳು ಸಲಹೆ ನೀಡಿರುವುದಾಗಿ ವರದಿಯಾಗಿದೆ.