ವಿಶ್ವದಲ್ಲೇ ಪ್ರಥಮ: ಈ ದೇಶದಲ್ಲಿ ಗರ್ಭಪಾತ ಸಂವಿಧಾನಾತ್ಮಕ ಹಕ್ಕು !
ಪ್ಯಾರೀಸ್ ನ ಐಫೆಲ್ ಟವರ್ ಬಳಿ ಸಂಭ್ರಮಾಚರಣೆ ನಡೆಸಿದ ಗರ್ಭಪಾತ ಹಕ್ಕು ಬೆಂಬಲಿಸುವ ಕಾರ್ಯಕರ್ತರು Photo: twitter.com/ElBeardsley
ವರ್ಸೆಲ್ಲೆಸ್: ಗರ್ಭಪಾತದ ಹಕ್ಕನ್ನು ಸಂವಿಧಾನದಲ್ಲಿ ಸೇರಿಸುವ ಐತಿಹಾಸಿಕ ನಿರ್ಧಾರವನ್ನು ಫ್ರಾನ್ಸ್ ಸೋಮವಾರ ಕೈಗೊಂಡಿದೆ. ಈ ಮೂಲಕ ಫ್ರಾನ್ಸ್, ಗರ್ಭಪಾತವನ್ನು ಸಂವಿಧಾನಾತ್ಮಕ ಹಕ್ಕಾಗಿ ಘೋಷಿಸಿದ ಮೊದಲ ದೇಶವಾಗಿದೆ. ಮಹಿಳಾ ಹಕ್ಕುಗಳ ಸಂಘಟನೆಗಳು ಈ ಕ್ರಮವನ್ನು ಐತಿಹಾಸಿಕ ಎಂದು ಬಣ್ಣಿಸಿದ್ದರೆ, ಗರ್ಭಪಾತ ವಿರೋಧಿ ಸಂಘಟನೆಗಳು ಕಟುವಾಗಿ ಟೀಕಿಸಿವೆ.
ಈ ಕ್ರಮವನ್ನು ಸೆನೆಟರ್ ಗಳು ವ್ಯಾಪಕವಾಗಿ ಬೆಂಬಲಿಸಿದ್ದು, ಪ್ಯಾರೀಸ್ ನೆ ಹೊರವಲಯದ ವರ್ಸೆಲ್ಲೆಸ್ ಅರಮನೆಯಲ್ಲಿ ನಡೆದ ಸಂಸತ್ತಿನ ಜಂಟಿ ಅಧಿವೇಶನದಲ್ಲಿ 780 ಮತಗಳು ಈ ನಿರ್ಣಯದ ಪರವಾಗಿ ಚಲಾವಣೆಯಾದರೆ, ಕೇವಲ 72 ಮಂದಿ ವಿರೋಧಿಸಿದರು.
ಈ ಮತದಾನದ ಫಲಿತಾಂಶವನ್ನು ದೈತ್ಯ ಪರದೆಯಲ್ಲಿ ಪ್ರದರ್ಶಿಸುತ್ತಿದ್ದಂತೆ, ಗರ್ಭಪಾತ ಹಕ್ಕು ಬೆಂಬಲಿಸುವ ಕಾರ್ಯಕರ್ತರು ಪ್ಯಾರೀಸ್ ನಲ್ಲಿ ಸಮಾವೇಶಗೊಂಡು, ಸಂಭ್ರಮಾಚರಣೆ ನಡೆಸಿದರು. ಐಫೆಲ್ ಟವರ್ ಬಳಿ "ನನ್ನದೇಹ ನನ್ನ ಹಕ್ಕು" ಎಂಬ ಸಂದೇಶವನ್ನು ಪ್ರದರ್ಶಿಸಿದರು.
ಗರ್ಭಪಾತದ ಹಕ್ಕು ಈ ದೇಶದಲ್ಲಿ ವ್ಯಾಪಕವಾಗಿ ಸ್ವೀಕೃತವಾಗಿದ್ದು, ಗರ್ಭಪಾತವನ್ನು ಕಾನೂನುಬದ್ಧಗೊಳಿಸುವ ಕ್ರಮವನ್ನು ಫ್ರಾನ್ಸ್ ನ ಶೇಕಡ 80ರಷ್ಟು ಮಂದಿ ಬೆಂಬಲಿಸಿರುವುದು ಸಮೀಕ್ಷೆಯಿಂದ ವ್ಯಕ್ತವಾಗಿತ್ತು.
"ನಿಮ್ಮ ದೇಹ ನಿಮಗೆ ಸೇರಿದ್ದು, ನಿಮಗಾಗಿ ಬೇರೆ ಯಾರೂ ನಿರ್ಧಾರ ಕೈಗೊಳ್ಳುವಂತಿಲ್ಲ" ಎನ್ನುವ ಸಂದೇಶವನ್ನು ಎಲ್ಲ ಮಹಿಳೆಯರಿಗೆ ರವಾನಿಸುತ್ತಿದ್ದೇವೆ ಎಂದು ಪ್ರಧಾನಿ ಗ್ಯಾಬ್ರಿಯೆಲ್ ಅಟ್ಟಲ್ ಹೇಳಿದ್ದಾರೆ. ಫ್ರಾನ್ಸ್ ನಲ್ಲಿ 1974ರಿಂದಲೂ ಗರ್ಭಪಾತದ ಹಕ್ಕಿಗೆ ಸಂಬಂಧಿಸಿದ ಕಾನೂನು ಜಾರಿಯಲ್ಲಿದೆ.
ಅಮೆರಿಕದಲ್ಲಿ ಗರ್ಭಪಾತವನ್ನು ಮಹಿಳೆಯರ ಸಾಂವಿಧಾನಿಕ ಹಕ್ಕು ಎಂದು ಘೋಷಿಸುವ ರಾಯ್ ವಿ.ವೇಡ್ ಅವರ ತೀರ್ಪನ್ನು 2022ರಲ್ಲಿ ಅಮೆರಿಕದ ಸುಪ್ರೀಂಕೋರ್ಟ್ ತಳ್ಳಿಹಾಕಿದ ಹಿನ್ನೆಲೆಯಲ್ಲಿ ಫ್ರಾನ್ಸ್ ಇದೀಗ ಇದನ್ನು ಮೂಲಭೂತ ಕಾನೂನಾಗಿ ಜಾರಿಗೊಳಿಸಿದ ಮೊದಲ ದೇಶವಾಗಲಿದೆ.