ಜಪಾನ್ನಲ್ಲಿ ಪ್ರಬಲ ಭೂಕಂಪ; ಇಶಿಕಾವ ಕರಾವಳಿಗೆ ಅಪ್ಪಳಿಸಿದ 1.2 ಮೀಟರ್ ಎತ್ತರದ ಸುನಾಮಿ ಅಲೆಗಳು
Screengrab:X
ಟೋಕಿಯೋ: ಉತ್ತರ-ಮಧ್ಯ ಜಪಾನ್ನಲ್ಲಿ ಇಂದು ಪ್ರಬಲ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ 7.4 ತೀವ್ರತೆಯನ್ನು ಈ ಭೂಕಂಪ ದಾಖಲಿಸಿದ್ದು ಇಶಿಕಾವ ನಗರದ ವಜೀಮಾ ಕರಾವಳಿ ತೀರದಲ್ಲಿ ಸುನಾಮಿ ಅಪ್ಪಳಿಸಿದ್ದು 1.2 ಮೀಟರಿನಷ್ಟು ಎತ್ತರಕ್ಕೆ ಅಲೆಗಳು ಎದ್ದಿವೆ. ಅಧಿಕಾರಿಗಳು ಈ ಹಿಂದೆಯೇ ದೇಶದ ವಾಯುವ್ಯ ಕರಾವಳಿಯಲ್ಲಿ ಸುನಾಮಿ ಎಚ್ಚರಿಕೆಗಳನ್ನು ನೀಡಿದ್ದರು.
ನೋಟೋ ಕರಾವಳಿಯಲ್ಲಿ ಐದು ಮೀಟರ್ ಎತ್ತರದ ಅಲೆಗಳೊಂದಿಗೆ ಸುನಾಮಿ ಅಪ್ಪಳಿಸಬಹುದೆಂದು ಜಪಾನ್ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ನೋಟೋ ಪ್ರದೇಶದಲ್ಲಿ ಹಲವಾರು ಭೂಕಂಪನಗಳು ಸಂಭವಿಸಿದ್ದು ಸ್ಥಳೀಯ ಕಾಲಮಾನ ಸಂಜೆ 4.06ಗೆ ಮೊದಲ ಬಾರಿ 5.7 ತೀವೃತೆಯ ಭೂಕಂಪನ ದಾಖಲಾಗಿತ್ತು. ಇದರ ಬೆನ್ನಲ್ಲೇ 7.6 , 6.1, 4.5, 4.6 ಮತ್ತು 4.8 ತೀವ್ರತೆಯ ಭೂಕಂಪನಗಳು ದಾಖಲಾಗಿವೆ.
ಜಪಾನ್ ಹವಾಮಾನ ಏಜನ್ಸಿ ನೀಡಿದ ಮಾಹಿತಿಯಂತೆ ಭೂಕಂಪವು ಇಶಿಕಾವ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಭವಿಸಿದೆ. ಇದರ ಬೆನ್ನಲ್ಲೇ ಇಶಿಕಾವ, ನಿಗಾಟ ಮತ್ತು ತೊಯಮಾ ಕರಾವಳಿಗಳಲ್ಲಿ ಸುನಾಮಿ ಎಚ್ಚರಿಕೆಗಳನ್ನು ನೀಡಲಾಗಿತ್ತು.
ರಾಜಧಾನಿ ಟೋಕಿಯೋ ಮತ್ತು ಕ್ಯಾಂಟೊ ಪ್ರದೇಶಗಳಲ್ಲೂ ಕಂಪನಗಳ ಅನುಭವವಾಗಿದೆ.
ಕರಾವಳಿ ಪ್ರದೇಶಗಳಿಂದ ದೂರ ಹೋಗುವಂತೆ ಹಾಗೂ ಕಟ್ಟಡಗಳ ಮೇಲಂತಸ್ತುಗಳಿಗೆ ಅಥವಾ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಜನರಿಗೆ ಸೂಚಿಸಲಾಯಿತು.