ರಶ್ಯ | ಚರ್ಚ್, ಪೊಲೀಸ್ ಠಾಣೆಯ ಮೇಲೆ ದಾಳಿ ; ಪಾದ್ರಿ, ಪೊಲೀಸರ ಸಹಿತ 19 ಮಂದಿ ಮೃತ್ಯು
3 ದಿನ ಶೋಕಾಚರಣೆ ಘೋಷಣೆ
PC:X
ಮಾಸ್ಕೋ : ರಶ್ಯದ ಉತ್ತರ ಕಾಕಸಸ್ ಪ್ರದೇಶದ ಡಾಗೆಸ್ತಾನ್ನಲ್ಲಿ 6 ಬಂದೂಕುಧಾರಿಗಳು ಯೆಹೂದಿಯರ ಪ್ರಾರ್ಥನಾ ಮಂದಿರ, ಚರ್ಚ್ ಹಾಗೂ ಪೊಲೀಸ್ ಚೆಕ್ಪೋಸ್ಟ್ ಮೇಲೆ ದಾಳಿ ನಡೆಸಿದ್ದು ಪಾದ್ರಿ, ಪೊಲೀಸ್ ಅಧಿಕಾರಿಗಳು ಮತ್ತು ನಾಗರಿಕರ ಸಹಿತ 19 ಮಂದಿ ಸಾವನ್ನಪ್ಪಿದ್ದಾರೆ ಎಂದು ಡಾಗೆಸ್ತಾನ್ ಪ್ರಾಂತದ ಗವರ್ನರ್ ಸೆರ್ಗೆಯ್ ಮೆಲಿಕೋವ್ ಸೋಮವಾರ ಹೇಳಿದ್ದಾರೆ.
ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ. ಡಾಗೆಸ್ತಾನ್ನಲ್ಲಿ ಜೂನ್ 24ರಿಂದ 26ರವರೆಗೆ ಮೂರು ದಿನದ ಶೋಕಾಚರಣೆ ಘೋಷಿಸಲಾಗಿದೆ.
ಪ್ರಕ್ಷುಬ್ಧ ಉತ್ತರ ಕಾಕಸಸ್ ಪ್ರದೇಶದಲ್ಲಿ ರವಿವಾರ ನಡೆದ ಈ ಘೋರ ಕೃತ್ಯದ ಹೊಣೆಯನ್ನು ಯಾರೂ ವಹಿಸಿಕೊಂಡಿಲ್ಲ. ಆದರೆ ಇದರ ಹಿಂದೆ ಯಾರಿದ್ದಾರೆ ಮತ್ತು ಅವರ ಉದ್ದೇಶವೇನೆಂಬುದು ನಮಗೆ ತಿಳಿದಿದೆ ಎಂದವರು ಹೇಳಿದ್ದಾರೆ. ಭದ್ರತಾ ಪಡೆಗಳ ಪ್ರತಿದಾಳಿಯಲ್ಲಿ ಎಲ್ಲಾ ಆರೋಪಿಗಳನ್ನೂ ಹತ್ಯೆ ಮಾಡಲಾಗಿದೆ. ದಾಳಿಕೋರರಲ್ಲಿ ಡಾಗೆಸ್ತಾನದ ಸೆರ್ಗೋಕಲ ಜಿಲ್ಲೆಯ ಮುಖ್ಯಸ್ಥನ ಇಬ್ಬರು ಪುತ್ರರೂ ಸೇರಿದ್ದಾರೆ. ಡೆರ್ಬೆಂಟ್ ಮತ್ತು ಮಖಚ್ಕಲ ನಗರಗಳಲ್ಲಿ ರವಿವಾರ ದಾಳಿ ನಡೆದಿದೆ. ರಶ್ಯದ ಆರ್ಥಡಾಕ್ಸ್ ಚರ್ಚ್ನ ಪೆಂಟಕೋಸ್ಟ್ ಹಬ್ಬದ ಸಂದರ್ಭ ದಾಳಿ ನಡೆದಿದೆ.
ಚೆಚನ್ಯಾದ ಗಡಿಭಾಗದಲ್ಲಿರುವ ಡಾಗೆಸ್ತಾನ್ನಲ್ಲಿ ನಡೆದಿರುವ ಈ ಭಯೋತ್ಪಾದಕ ಕೃತ್ಯದ ಬಗ್ಗೆ ಕ್ರಿಮಿನಲ್ ತನಿಖೆಗೆ ಚಾಲನೆ ನೀಡಲಾಗಿದೆ. ಎರಡು ಆರ್ಥಡಾಕ್ಸ್ ಚರ್ಚ್ಗಳು, ಒಂದು ಯೆಹೂದಿ ಪ್ರಾರ್ಥನಾ ಮಂದಿರ ಹಾಗೂ ಪೊಲೀಸ್ ಚೆಕ್ಪೋಸ್ಟ್ ಮೇಲೆ ದಾಳಿ ನಡೆದಿದೆ. ಡೆರ್ಬಂಟ್ ಆರ್ಥಡಾಕ್ಸ್ ಚರ್ಚ್ನ ಪಾದ್ರಿ ನಿಕೊಲಯ್ ಕೊಟೆಲಿಂಕೊವ್, ಕನಿಷ್ಠ 15 ಪೊಲೀಸ್ ಅಧಿಕಾರಿಗಳು, ನಾಗರಿಕರು ಸೇರಿದಂತೆ 19 ಮಂದಿ ಸಾವನ್ನಪ್ಪಿರುವುದಾಗಿ ಪ್ರಾಥಮಿಕ ವರದಿ ಲಭಿಸಿದೆ ಎಂದು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ಸಮಿತಿ ಹೇಳಿದೆ.
ಜೂನ್ 24ರಿಂದ 26ರವರೆಗೆ ಡಾಗೆಸ್ತಾನ್ ಪ್ರದೇಶದಲ್ಲಿ ಶೋಕಾಚರಣೆ ಘೋಷಿಸಿದ್ದು ಧ್ವಜಗಳನ್ನು ಅರ್ಧಮಟ್ಟದಲ್ಲಿ ಹಾರಿಸಲಾಗುವುದು. ಟಿವಿ ಹಾಗೂ ರೇಡಿಯೋಗಳು, ಸಾಂಸ್ಕøತಿಕ ಸಂಸ್ಥೆಗಳಲ್ಲಿ ಎಲ್ಲಾ ಮನೋರಂಜನಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.
*ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆ
ದಾಳಿ ನಡೆಸಿದವರು ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯ ಸದಸ್ಯರು ಎಂದು ಕಾನೂನು ಜಾರಿ ಏಜೆನ್ಸಿಯ ಅಧಿಕಾರಿಗಳನ್ನು ಉಲ್ಲೇಖಿಸಿ ರಶ್ಯದ ತಾಸ್ ಸುದ್ಧಿಸಂಸ್ಥೆ ವರದಿ ಮಾಡಿದೆ.
ದಾಳಿಕೋರರನ್ನು ಇನ್ನಷ್ಟೇ ಗುರುತಿಸಬೇಕಿದೆ. ಡೆರ್ಬಂಟ್ನಲ್ಲಿನ ಯೆಹೂದಿ ಪ್ರಾರ್ಥನಾಲಯಕ್ಕೆ ದಾಳಿ ನಡೆಸಿದ ಬಳಿಕ ಅದಕ್ಕೆ ಬೆಂಕಿಹಚ್ಚಲಾಗಿದೆ. ಚರ್ಚ್ ಮೇಲಿನ ದಾಳಿಯ ಬಳಿಕ ಚರ್ಚ್ನಲ್ಲಿ ಅಡಗಿ ಕೂತಿದ್ದ 19 ಮಂದಿಯನ್ನು ಅಲ್ಲಿಂದ ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.