ಬೀಜಿಂಗ್ ರಕ್ಷಿಸಲು ಪಟ್ಟಣಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ: ಚೀನಾದಲ್ಲಿ ಭುಗಿಲೆದ್ದ ಆಕ್ರೋಶ
PHOTO: NDTV
ಬೀಜಿಂಗ್: ದಾಖಲೆಯ ಮಳೆಯಿಂದಾಗಿ ಚೀನಾದ ಉತ್ತರ ಹೆಬೈ ಪ್ರಾಂತ್ಯದ ಸುಮಾರು 10 ಲಕ್ಷ ಮಂದಿಯನ್ನು ಸ್ಥಳಾಂತರಗೊಳಿಸಲಾಗಿದೆ. ಈ ದಾಖಲೆಯ ಮಳೆಯಿಂದಾಗಿ ಚೀನಾ ರಾಜಧಾನಿ ಬೀಜಿಂಗ್ ಅನ್ನು ರಕ್ಷಿಸಲು ಪ್ರಾಧಿಕಾರಿಗಳು ಅನಿವಾರ್ಯವಾಗಿ ಮಳೆ ನೀರನ್ನು ಜನವಸತಿ ಪ್ರದೇಶಗಳತ್ತ ತಿರುಗಿಸಿ, ಸಂಗ್ರಹಿಸಲು ಮುಂದಾಗಿರುವುದರಿಂದ ಆ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಚೀನಾ ಪ್ರಾಧಿಕಾರಿಗಳ ಈ ಕ್ರಮದ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಜುಲೈ ತಿಂಗಳಾಂತ್ಯದಲ್ಲಿ ಕೇವಲ ಒಂದು ವಾರದ ಕಾಲ ಸುರಿದ ಮಳೆಯಿಂದಾಗಿ ಕಳೆದ ಆರು ದಶಕಗಳಲ್ಲೇ 110 ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ಈ ಭಾಗವು ಅತ್ಯಂತ ಗಂಭೀರ ಪ್ರವಾಹ ಪರಿಸ್ಥಿತಿಗೆ ತುತ್ತಾಗಿದೆ. ಅದರಲ್ಲೂ ಬವೋಡಿಂಗ್ ಇತಿಹಾಸದಲ್ಲೇ ಹೆಬೈ ಅತ್ಯಂತ ಗಂಭೀರವಾಗಿ ಹಾನಿಗೊಳಗಾಗಿದೆ.
ಪ್ರವಾಹ ನಿಯಂತ್ರಣ ಕಾನೂನುಗಳ ಪ್ರಕಾರ, ನದಿ ಪಾತ್ರದಲ್ಲಿ ಪ್ರವಾಹ ಸೃಷ್ಟಿಯಾಗಿ ಮೊದಲ ಹಂತದ ರಕ್ಷಣಾ ಜಲಾಶಯಗಳಲ್ಲಿನ ಗರಿಷ್ಠ ಮಿತಿಯನ್ನು ಮೀರಿದಾಗ, ಆ ಪ್ರವಾಹದ ನೀರನ್ನು ತಾತ್ಕಾಲಿಕವಾಗಿ ತಗ್ಗು ಪ್ರದೇಶದ ಜನವಸತಿ ಪ್ರದೇಶಗಳು ಸೇರಿದಂತೆ ಪ್ರವಾಹ ನೀರು ಸಂಗ್ರಹ ಪ್ರದೇಶಗಳು ಎಂದು ಕರೆಯಲಾಗುವ ಪ್ರದೇಶಗಳಿಗೆ ತಿರುಗಿಸಬಹುದಾಗಿದೆ.
ಜುಲೈ 31ರಂದು ಹೆಬೈ ಪ್ರಾಂತ್ಯವು ಪ್ರವಾಹ ನೀರು ಸಂಗ್ರಹಣೆಗಾಗಿ ಮೀಸಲಿಟ್ಟಿರುವ ಪ್ರದೇಶಗಳಲ್ಲಿನ 13. ಜಲಾಶಯಗಳ ಪೈಕಿ 7 ಜಲಾಶಯಗಳ ಗೇಟ್ ಅನ್ನು ತೆರೆಯಲಾಗಿತ್ತು. ಈ ಪೈಕಿ ಬೀಜಿಂಗ್ ಬವೋಡಿಂಗ್ ದಕ್ಷಿಣದಲ್ಲಿನ ಶುವೊಶುವೊ ಹಾಗೂ ಉತ್ತರ ಶಿಯಾಂಗನ್ ನಗರಗಳು ಸೇರಿದ್ದವು. ಈ ವಲಯವನ್ನು ಹೆಬೈ, ಬೀಜಿಂಗ್ ಹಾಗೂ ತಿಯಾಂಜಿನ್ನ ಶಕ್ತಿ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹೊಂದಿದ್ದರು.
ಪ್ರವಾಹ ತಗ್ಗಿದ ನಂತರ ಕೃಷಿ ಉತ್ಪಾದನೆ ಹಾಗೂ ವಸತಿ ಪ್ರದೇಶಗಳಿಗೆ ಆಗಿರುವ ಹಾನಿಯ ಪರಾಮರ್ಶೆ ಕೈಗೊಳ್ಳಲಾಗುವುದು ಎಂದು ಜಲ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳು ಪ್ರಕಟಿಸಿದ್ದಾರೆ. ಆದರೆ, ಈ ಪ್ರಕಟಣೆಯಿಂದ ಆ ಭಾಗದ ಸಂತ್ರಸ್ತ ನಾಗರಿಕರು ಮನವೊಲಿಕೆಗೊಳಗಾದಂತೆ ಕಂಡು ಬರಲಿಲ್ಲ ಎಂದು ವರದಿಯಾಗಿದೆ.