ಯೆಮನ್ ನಲ್ಲಿ ಪ್ರವಾಹ: 30 ಮಂದಿ ಮೃತ್ಯು
ಸನಾ : ಯೆಮನ್ ನಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ, ಪ್ರವಾಹದಿಂದಾಗಿ 30 ಮಂದಿ ಸಾವನ್ನಪ್ಪಿದ್ದು ನೂರಾರು ಜನರು ನಿರಾಶ್ರಿತರಾಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ದಕ್ಷಿಣದ ಹೊಡೆಡಾ ನಗರದಲ್ಲಿ ಸುಮಾರು 500 ಮನೆಗಳ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. 15 ಮಂದಿ ಮೃತಪಟ್ಟಿದ್ದು 5 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ನೈಋತ್ಯ ನಗರ ತೈಜ್ ಮತ್ತು ವಾಯವ್ಯ ನಗರ ಹಜ್ಜಾದಲ್ಲಿ ಈ ವಾರದ ಆರಂಭದಿಂದ ಮಳೆಯಾಗುತ್ತಿದ್ದು ಹಲವಾರು ಮನೆಗಳು ಜಲಾವೃತಗೊಂಡಿವೆ. ಪ್ರವಾಹದಿಂದ ತೈಜ್ ನಗರದಲ್ಲಿ 15 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರ ಏಜೆನ್ಸಿ ಗುರುವಾರ ಹೇಳಿದೆ.
ಯೆಮನ್ ನ ತಿಹಾಮಾ ಕರಾವಳಿ ಪ್ರದೇಶದಲ್ಲಿ ವ್ಯಾಪಕ ಪ್ರಾಣಹಾನಿ, ಬೆಳೆ ನಷ್ಟ ಸಂಭವಿಸಿದೆ. ಪ್ರವಾಹದಿಂದ ಹಲವು ಪ್ರದೇಶಗಳಲ್ಲಿ ರಾಶಿಬಿದ್ದಿರುವ ಕೆಸರು-ಮಣ್ಣಿನಲ್ಲಿ ಸಿಲುಕಿ ಹಲವು ಜಾನುವಾರುಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.
Next Story