ಮ್ಯಾನ್ಮಾರ್ ನಲ್ಲಿ ಪ್ರವಾಹ, ಭೂಕುಸಿತ: 5 ಮಂದಿ ಮೃತ್ಯು; 40,000 ಜನರ ಸ್ಥಳಾಂತರ
Photo : NDTV
ಯಾಂಗಾನ್ : ಮ್ಯಾನ್ಮಾರ್ನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ ಹಲವೆಡೆ ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು 5 ಮಂದಿ ಮೃತಪಟ್ಟಿದ್ದಾರೆ. 40,000ಕ್ಕೂ ಅಧಿಕ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
ಎರಡು ತಿಂಗಳ ಹಿಂದೆ ಮೋಚ ಚಂಡಮಾರುತದ ಪ್ರಹಾರದಿಂದ ನಲುಗಿದ್ದ ರಖೈನ್ ರಾಜ್ಯದ ಬಹುತೇಕ ಪ್ರದೇಶ ಹಾಗೂ ಕೃಷಿ ಭೂಮಿ ಜಲಾವೃತಗೊಂಡಿದ್ದು ವ್ಯಾಪಕ ನಾಶ-ನಷ್ಟ ಉಂಟಾಗಿದೆ. ಯಾಂಗಾನ್ನ ಈಶಾನ್ಯ ನಗರ ಬಾಗೊದ ಹಲವು ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಕಚಿನ್, ಕರೆನ್, ಮೋನ್, ಚಿನ್ ಸೇರಿದಂತೆ 9 ರಾಜ್ಯಗಳು ಪ್ರವಾಹದ ಸಮಸ್ಯೆಗೆ ಸಿಲುಕಿವೆ. ಭೂಕುಸಿತದ ಕಾರಣ ಕರೆನ್ ರಾಜ್ಯವನ್ನು ಥೈಲ್ಯಾಂಡ್ ಗಡಿಪ್ರದೇಶಕ್ಕೆ ಸಂಪರ್ಕಿಸುವ ಪ್ರಮುಖ ಹೆದ್ದಾರಿಗೆ ಹಾನಿಯಾಗಿದ್ದು ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ. ಹೆದ್ದಾರಿ ಸಂಪರ್ಕ ಮರುಸ್ಥಾಪಿಸಲು ಸುಮಾರು 1 ತಿಂಗಳು ಬೇಕಾಗಬಹುದು ಎಂದು ಸೇನಾಡಳಿತ ಮಾಹಿತಿ ನೀಡಿದೆ. ಮ್ಯಾನ್ಮಾರ್ನಲ್ಲಿ ಸಾಮಾನ್ಯವಾಗಿ ಜುಲೈ-ಆಗಸ್ಟ್ನಲ್ಲಿ ಮುಂಗಾರು ಮಳೆ ಸುರಿಯುತ್ತದೆ. ಆದರೆ ಈ ಬಾರಿ ಹವಾಮಾನ ವೈಪರೀತ್ಯದ ಪರಿಣಾಮ ಮಳೆಯ ಪ್ರಮಾಣ ಹಲವು ಪಟ್ಟು ಅಧಿಕವಾಗಿದೆ. ಶುಕ್ರವಾರದ ವರೆಗೆ ಸುಮಾರು 40,000 ಜನರನ್ನು ತಾತ್ಕಾಲಿಕ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಾಮಾಜಿಕ ಕಲ್ಯಾಣ, ಪರಿಹಾರ ಮತ್ತು ಪುನರ್ವಸತಿ ಸಚಿವಾಲಯದ ನಿರ್ದೇಶಕಿ ಲೆ ಶ್ವೆಝಿನ್ ಹೇಳಿದ್ದಾರೆ. ಮುಂಗಾರು ಮಳೆಯ ಅಬ್ಬರದಿಂದಾಗಿ ಮ್ಯಾನ್ಮಾರ್ನ ಸುಮಾರು 50,000 ಮಂದಿ ಸಮಸ್ಯೆಗೆ ಸಿಲುಕಿದ್ದು ಮುಂಗಾರು ಭತ್ತದ ಬೆಳೆಗೆ ವ್ಯಾಪಕ ನಷ್ಟವಾಗಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಸಮಿತಿ ಹೇಳಿದೆ. ಮೇ ತಿಂಗಳಿನಲ್ಲಿ ಮ್ಯಾನ್ಮಾರ್ನಲ್ಲಿ ಕನಿಷ್ಟ 148 ಮಂದಿಯ ಸಾವಿಗೆ ಹಾಗೂ ಭಾರೀ ಹಾನಿಗೆ ಕಾರಣವಾದ ಮೋಚ ಚಂಡಮಾರುತದ ಬಳಿಕವೂ ಸೇನಾಡಳಿತ ಮುಂಗಾರು ಮಳೆಯ ಪೂರ್ವಸಿದ್ಧತೆ ಮಾಡಿಕೊಂಡಿಲ್ಲ. ಚಂಡಮಾರುತದಿಂದ ತೊಂದರೆಗೆ ಒಳಗಾದವರಿಗೆ ಮಾನವೀಯ ನೆರವನ್ನು ವಿತರಿಸುವ ಅಂತರಾಷ್ಟ್ರೀಯ ಸಂಘಟನೆಗಳಿಗೆ ಅವಕಾಶ ನೀಡುತ್ತಿಲ್ಲ ಎಂದು ವಿಶ್ವಸಂಸ್ಥೆಯ ಸಮಿತಿ ಟೀಕಿಸಿದೆ.