ವಾಶಿಂಗ್ಟನ್ | ಫೆಲೆಸ್ತೀನಿಯರೆಂದು ಭಾವಿಸಿ ಇಬ್ಬರು ಇಸ್ರೇಲಿ ಪ್ರಜೆಗಳ ಮೇಲೆ ಗುಂಡಿನ ದಾಳಿ
ಅಮೆರಿಕದಲ್ಲಿ ಫೆಲೆಸ್ತೀನ್ ವಿರೋಧಿ ದ್ವೇಷದ ಹೆಚ್ಚಳದ ಬಗ್ಗೆ ಕಳವಳ

ಸಾಂದರ್ಭಿಕ ಚಿತ್ರ
ವಾಶಿಂಗ್ಟನ್: ಫೆಲೆಸ್ತೀನಿಯರೆಂದು ಭಾವಿಸಿ ಇಬ್ಬರು ಇಸ್ರೇಲಿ ಪ್ರಜೆಗಳಿದ್ದ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ ಫ್ಲೋರಿಡಾದ ವ್ಯಕ್ತಿಯೋರ್ವನನ್ನು ಕೊಲೆ ಯತ್ನ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಮೊರ್ಡೆಚೈ ಬ್ರಾಫ್ಮನ್(27) ಎಂಬಾತನ ವಿರುದ್ಧ ಇಬ್ಬರು ಇಸ್ರೇಲಿ ಪ್ರಜೆಗಳ ಕೊಲೆ ಯತ್ನದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ʼಮಿಯಾಮಿ ಬೀಚ್ನಲ್ಲಿ ನಾನು ಟ್ರಕ್ ಚಲಾಯಿಸುತ್ತಿದ್ದಾಗ ಇಬ್ಬರನ್ನು ನೋಡಿದೆ. ಅವರು ಫೆಲೆಸ್ತೀನಿಯರೆಂದು ಭಾವಿಸಿ ನಾನು ಗುಂಡಿಕ್ಕಿದ್ದೇನೆʼ ಎಂದು ಪೊಲೀಸರ ವಿಚಾರಣೆಯ ವೇಳೆ ಮೊರ್ಡೆಚೈ ಬ್ರಾಫ್ಮನ್ ಹೇಳಿದ್ದಾನೆ.
ಈ ಕುರಿತು ಸ್ಥಳೀಯ ಪೊಲೀಸರು ಪ್ರತಿಕ್ರಿಯಿಸಿ, ಘಟನೆಯಲ್ಲಿ ಗಾಯಗೊಂಡ ಇಬ್ಬರು ಫೆಲೆಸ್ತೀನಿಯನ್ನರಲ್ಲ, ಅವರು ಇಸ್ರೇಲಿ ಪ್ರಜೆಗಳು. ಇಬ್ಬರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಫೆಲೆಸ್ತೀನಿಯರೆಂದು ಭಾವಿಸಿ ಇಬ್ಬರು ಇಸ್ರೇಲಿ ಪ್ರಜೆಗಳಿದ್ದ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ ಸುದ್ದಿ ಬಹಿರಂಗಗೊಳ್ಳುತ್ತಿದ್ದಂತೆ ಮಾನವ ಹಕ್ಕುಗಳ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ ಮತ್ತು ಗಾಝಾ ನಡುವಿನ ಯುದ್ಧದ ಬಳಿಕ ಅಮೆರಿಕದಲ್ಲಿ ಮುಸ್ಲಿಂ ವಿರೋಧಿ, ಫೆಲೆಸ್ತೀನ್ ವಿರೋಧಿ ದ್ವೇಷವು ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.